DAKSHINA KANNADA
ಮತ್ತೆ ಮುಂದುವರೆದ ಮಳೆ ಆರ್ಭಟ – ಪ್ರವಾಹಕ್ಕೆ ರಾತ್ರೋರಾತ್ರಿ ಜನರ ಸ್ಥಳಾಂತರ

ಪುತ್ತೂರು ಅಗಸ್ಟ್ 03: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ನಿರಂತರ ಎರಡನೇ ದಿನವೂ ರಾತ್ರಿ ವೇಳೆ ಭಾರೀ ಮಳೆಯಾಗಿದೆ.
ಸುಳ್ಯದ ಕಲ್ಲುಗುಂಡಿ ಬಳಿ ತಡರಾತ್ರಿ ಮತ್ತೆ ರಸ್ತೆಗೆ ಪಯಸ್ವಿನಿ ನದಿ ನೀರು ನುಗ್ಗಿದ್ದು, ಕಲ್ಲುಗುಂಡಿ ಪರಿಸರದಲ್ಲಿ ಹಲವು ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಹತ್ತಕ್ಕೂ ಮಿಕ್ಕಿದ ಮನೆ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ರಾತ್ರಿ ಸುರಿದ ಧಾರಾಕಾರ ಮಳೆಗೆ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಕೊಯನಾಡಿನಲ್ಲಿ ಕೂಡ ನಿರಂತರ ಮಳೆಯಿಂದ ಆತಂಕ ಸೃಷ್ಟಿಯಾಗಿದೆ. ಹಲವು ಕುಟುಂಬಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.