Connect with us

LATEST NEWS

ಆರೋಗ್ಯವಂತರು ಮಾಸ್ಕ್ ಧರಿಸುವ ಅಗತ್ಯವಿಲ್ಲ – ಜಿಲ್ಲಾಧಿಕಾರಿ

ಆರೋಗ್ಯವಂತರು ಮಾಸ್ಕ್ ಧರಿಸುವ ಅಗತ್ಯವಿಲ್ಲ – ಜಿಲ್ಲಾಧಿಕಾರಿ

ಮಂಗಳೂರು ಮಾರ್ಚ್ 16: ಇತ್ತೀಚಿನ ದಿನಗಳಲ್ಲಿ ಕೊರೊನಾ ಹಿನ್ನಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಹೆಚ್ಚಾಗಿ ಧರಿಸುತ್ತಿರುವುದು ಕಂಡು ಬಂದಿದೆ. ಆದರೆ ಆರೋಗ್ಯವಂತ ವ್ಯಕ್ತಿಗಳು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳ, ಉದ್ಯಮ ಸಂಸ್ಥೆಗಳ ಸಭೆ ನಡೆಸಿ ಮಾತನಾಡಿದರು. ಮಾಸ್ಕ್ ಧರಿಸುವುದು ಎಲ್ಲರಿಗೂ ಕಡ್ಡಾಯವಲ್ಲ. ಅನಾರೋಗ್ಯ ಪೀಡಿತರು ಮತ್ತು ರೋಗ ಲಕ್ಷಣ ಇರುವವರು ಮಾಸ್ಕ್ ಧರಿಸಬೇಕಾಗಿದೆ ಎಂದು ಅವರು ಹೇಳಿದರು. ಅದಾಗ್ಯೂ ಜಿಲ್ಲೆಯಲ್ಲಿ ಮಾಸ್ಕ್ ಸಂಗ್ರಹ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಔಷಧಿ ನಿಯಂತ್ರಣ ಇಲಾಖೆಯು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲಿದೆ. ಮಾಸ್ಕ್ ದರದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಎಲ್ಲಾ ಕೈಗಾರಿಕಾ ಘಟಕಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಕಾಯಿಲೆ ಸಾಂಕ್ರಾಮಿಕವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ದೇಶ ವಿದೇಶಗಳಲ್ಲಿ ಪ್ರವಾಸ ಕೈಗೊಂಡಿರುವವರ ಮೇಲೆ ವೈದ್ಯಕೀಯ ನಿಗಾ ಇಟ್ಟು ಅವರನ್ನು 28 ದಿನಗಳ ನಿಗಾ ಅವಧಿಯಲ್ಲಿಡಬೇಕು ಅಲ್ಲದೇ ಅವರ ಕುಟುಂಬ ಸದಸ್ಯರು, ಅದರಲ್ಲೂ 60 ವರ್ಷ ಮೇಲಿನವರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕೈಗಾರಿಕೋದ್ಯಮಿಗಳು ದೇಶ ವಿದೇಶಗಳಿಗೆ ತಮ್ಮ ಪ್ರವಾಸವನ್ನು ಆದಷ್ಟು ನಿಯಂತ್ರಿಸಬೇಕು, ಅದೇ ರೀತಿ ವಿದೇಶಿ ವ್ಯವಹಾರಿಕ ಸಭೆಗಳನ್ನು ಮುಂದೂಡಬೇಕು ಎಂದು ಸಿಂಧು ಬಿ ರೂಪೇಶ್ ತಿಳಿಸಿದರು.

ದ.ಕ ಜಿಲ್ಲೆಯಲ್ಲಿ ಕೊರೊನಾ ವ್ಯಾಪಿಸದಂತೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಹಾಗೂ ನವ ಮಂಗಳೂರು ಬಂದರಿಗೆ ಆಗಮಿಸುವ ವಿದೇಶಿ ಯಾತ್ರಿಕರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ. ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೊಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ. ಮಂಗಳೂರಿನ ಇ.ಎಸ್.ಐ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುವುದು. ಇದೇ ರೀತಿ ಎನ್.ಎಂ.ಪಿ.ಟಿ ಆಸ್ಪತ್ರೆಯಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎಲ್ಲಾ ಕೈಗಾರಿಕಾ ಘಟಕಗಳು ತಮ್ಮ ಉದ್ಯೋಗಿಗಳ ಆರೋಗ್ಯದ ಮೇಲೆ ಗಮನ ಹರಿಸಬೇಕು. ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಅವರಿಗೆ ಎಲ್ಲ ಸೌಲಬ್ಯಗಳನ್ನು ಒದಗಿಸಿ ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *