LATEST NEWS
ಮಂಗಳೂರು – ಗುಂಡು ಹಾರಿದ್ದು ಲೈಸೆನ್ಸ್ ಇಲ್ಲದ ಪಿಸ್ತೂಲ್ ನಿಂದ – ಆದರೆ ಕಥೆ ಕಟ್ಟಿದೆ ಬೇರೆ
ಮಂಗಳೂರು ಜನವರಿ 08: ಆಟಿಕೆಯ ಗನ್ ಎಂದು ವ್ಯಕ್ತಿಯೊಬ್ಬರು ತನಗೆ ತಾನೆ ಶೂಟ್ ಮಾಡಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ನಂಬಲಾದ ಕಥೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ತನಿಖೆಗ ವೇಳೆ ಪಿಸ್ತೂಲ್ ಗೆ ಲೈಸೆನ್ಸ್ ಇಲ್ಲ ಎಂದು ತಿಳಿದು ಬಂದಿದ್ದು, ಇದೀಗ ಪ್ರಕರಣ ದಾಖಲಾಗಿದೆ.
ವಾಮಂಜೂರಿನ ಬಳಿ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಮೊದಲು ಆಟಿಕೆ ವಸ್ತು ಎಂದು ಗನ್ ನಿಂದ ಮಿಸ್ ಪೈರ್ ಆಗಿದೆ ಎಂದು ಸುದ್ದಿಯಾಗಿತ್ತು, ಬಳಿಕ ಪೊಲೀಸರು ತನಿಖೆ ನಡೆಸಿದಾಗ ಅದು ಪರವಾನಗಿ ಇಲ್ಲದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು, ಇದರಿಂದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ವಾಮಂಜೂರಿನ ಅದ್ದು ಅಲಿಯಾಸ್ ಬದ್ರುದ್ದೀನ್ (34) ಗುಂಡು ಹಾರಿಸಿದ ಆರೋಪಿ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ವಾಮಂಜೂರಿನ ಬಳಿ ಬದ್ರುದ್ದೀನ್ ರೆಟೇಲ್ ಮಳಿಗೆಯನ್ನು ನಡೆಸುತ್ತಿದ್ದ. ಆತ ಪರವಾನಗಿ ಇಲ್ಲದ ಪಿಸ್ತೂಲನ್ನು ಹೊಂದಿದ್ದು ಅದನ್ನು ಪರಿಶೀಲಿಸುವ ಉದ್ದೇಶದಿಂದ ಗುಂಡು ಹಾರಿಸಿದ್ದ. ಆ ಗುಂಡು ಆತನ ಮಳಿಗೆಯ ಹೊರಗಡೆ ಕುಳಿತಿದ್ದ ಮೊಹಮ್ಮದ್ ಸಫಾನ್ (25 ವರ್ಷ) ಎಂಬುವರಿಗೆ ತಗುಲಿದೆ. ಗಾಯಾಳುವನ್ನು ಚಿಕಿತ್ಸೆ ಸಲುವಾಗಿ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಮೂಡುಶೆಡ್ಡೆಯ ಇಮ್ರಾನ್ ಎಂಬಾತ ಬದ್ರುದ್ದೀನ್‌ಗೆ ಪರವಾನಗಿ ಇಲ್ಲದ ಪಿಸ್ತೂಲ್ ನೀಡಿದ್ದ ಎಂದು ವಿಚಾರಣೆಯಿಂದ ಗೊತ್ತಾಗಿದೆ. ಆರೋಪಿ ವಿರುದ್ಧ ಸಶಸ್ತ್ರ ಕಾಯ್ದೆಯ ಸೆಕ್ಷನ್ 3 (ಪರವಾನಗಿ ಇಲ್ಲದೇ ಶಸ್ತ್ರಾಸ್ತ್ರ ಹೊಂದುವುದು), ಸೆಕ್ಷನ್ 5 (1) (ಎ) ಮತ್ತು ಸೆಕ್ಷನ್ 27 (1) (ಪರವಾನಗಿ ಇಲ್ಲದೇ ಶಸ್ತ್ರಾಸ್ತ್ರ ಬಳಸುವುದು), ಸೆಕ್ಷನ್ 25 (ಎ) ( ಪರವಾನಗಿ ಇಲ್ಲದೇ ಶಸ್ತ್ರಾಸ್ತ್ರವನ್ನು ಪರೀಕ್ಷಿಸುವುದು) ಹಾಗೂ ಸೆಕ್ಷನ್ 25 (1ಬಿ) (ಪರವಾನಗಿ ಇಲ್ಲದೇ ಶಸ್ತ್ರಾಸ್ತ್ರದ ಮಾರಾಟಕ್ಕೆ ಯತ್ನಿಸುವುದು ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 110ರ (ಉದ್ದೇಶಪೂರ್ವಕವಲ್ಲದ ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.