KARNATAKA
ಜೆಡಿಎಸ್ ಮುಖಂಡ ಶಾಸಕ ಎಚ್ ಡಿ ರೇವಣ್ಣ – ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್ ನಿರಾಕರಣೆ
ಬೆಂಗಳೂರು ಮೇ 04 : ಜೆಡಿಎಸ್ ಮುಖಂಡ ಶಾಸಕ ರೇವಣ್ಣ ಅವರಿಗೆ ಕಿಡ್ನಾಪ್ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಈ ಕುರಿತ ಅರ್ಜಿಯನ್ನು ಮಧ್ಯಾಹ್ನ 3 ಗಂಟೆಯಿಂದ 4.30ರವರೆಗೂ ವಿಚಾರಣೆ ಅಲಿಸಿ ಕಾಯ್ದಿರಿಸಿದ್ದ ಆದೇಶವನ್ನು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಸಂಜೆ ಪ್ರಕಟಿಸಿದರು.
ರೇವಣ್ಣ ಪರ ಹೈಕೋರ್ಟ್‌ನ ಹಿರಿಯ ವಕೀಲ ಮೂರ್ತಿ ಡಿ.ನಾಯಕ್ ಅವರು ವಾದ ಮಾಡಿದ್ದು, ಎಸ್ ಐಟಿ FIR ಅಲ್ಲಿ ಇರುವ ಸಾರಾಂಶದ ಬಗ್ಗೆ ವಿವರಣೆ ನೀಡಿದ್ದಾರೆ. ಪ್ರಕರಣವನ್ನು ಅನಗತ್ಯವಾಗಿ ವಿಜೃಂಭಿಸಲು SIT ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ನಾವು ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ. ಸತೀಶ್ ಹೇಳಿಕೆ ಮತ್ತು ಎಫ್ ಐ ಆರ್ ಅಲ್ಲಿ ಇರುವ ಅಂಶಗಳಿಗು ವ್ಯತ್ಯಾಸ ಇದೆ. ನಿನ್ನೆ ಎಫ್ ಐ ಆರ್ ಮಾಡ್ತಾರೆ. ಇಂದು ವಿಚಾರಣೆಗೆ ಬನ್ನಿ ಅಂತಾರೆ ಅದರಿಂದಲೇ ಎಸ್ ಐಟಿ ಉದ್ದೇಶ ಏನು ಅಂತ ಗೊತ್ತಾಗ್ತಾ ಇದೆ. ಇವತ್ತು ಶನಿವಾರ ಬೇರೆ ವಿಚಾರಣೆಗೆ ಕರೆಸಿ ಬಲವಂತದ ಕ್ರಮ ಮಾಡಿದ್ರೆ ಎಂಬುದೇ ಆತಂಕವಾಗಿದೆ. ದೂರುದಾರನ ಹೇಳಿಕೆ ಬಿಟ್ಟರೆ ಬೇರೆ ಏನೂ ಇಲ್ಲ. ತಡರಾತ್ರಿ ತರಾತುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ನಾನ್ ಬೇಲೆಬಲ್ ಸೆಕ್ಷನ್ ಹಾಕಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೇ ತಕ್ಷಣ ಮತ್ತೆ 41 A ಯಲ್ಲಿ ನೊಟೀಸ್ ನೀಡಿದ್ದಾರೆ. ನಿನ್ನೆ ನಾನ್ ಬೇಲೆಬಲ್ ಸೆಕ್ಷನ್ ಹಾಕಿಲ್ಲ ಅಂದಿದ್ರು. ಆದರೆ ರಾತ್ರಿ ಇನ್ನೊಂದು ನಾನ್ ಬೇಲೆಬಲ್ ಸೆಕ್ಷನ್ FIR ಹಾಕಿದ್ದಾರೆ. ಅಲ್ಲದೇ ಇವತ್ತು ಶನಿವಾರ ಅಂತಾ ನೋಡಿಕೊಂಡು ನೊಟೀಸ್ ನೀಡಿದ್ದಾರೆ ಎಂದು ರೇವಣ್ಣ ಪರ ವಕೀಲ ಕೆಲ ನ್ಯಾಯಾಲಯದ ಆದೇಶಗಳನ್ನು ವಿವರಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಆರೋಪಿ ಬಲಾಢ್ಯರಿದ್ದಾರೆ. ಅಪಹರಣಕ್ಕೆ ಒಳಗಾಗಿರುವ ಮಹಿಳೆಯ ರಕ್ಷಣೆ ನಮ್ಮ ಮೊದಲ ಆದ್ಯತೆ. ಇಂತಹ ಘಟನೆಗಳು ಬಿಹಾರ, ಉತ್ತರ ಪ್ರದೇಶದಲ್ಲಿ ನಡೆಯುತ್ತವೆ ಎಂದು ನಾವು ಕೇಳಿ ಬಲ್ಲೆವು. ಆದರೆ, ಇಂತಹ ಘಟನೆ ಕರ್ನಾಟಕದಲ್ಲಿ ಆಗಲು ಬಿಡುವುದಿಲ್ಲ. ಈಗಾಗಲೇ ಸಂತ್ರಸ್ತ ಮಹಿಳೆಯ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬಾರದು’ ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ನಿರೀಕ್ಷಣಾ ಜಾಮೀನು ಕೋರಿದ ಅರ್ಜಿಯನ್ನು ತಿರಸ್ಕರಿಸಿದರು. ಪ್ರಕರಣದ ಮುಖ್ಯ ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿದರು.