LATEST NEWS
ನೆಗೆಟಿವ್ ಸಿಬಿಲ್ ಸ್ಕೋರ್ – ಬ್ಯಾಂಕ್ ಕೆಲಸವನ್ನೇ ಕಳೆದುಕೊಂಡ ಯುವಕ

ಚೆನ್ನೈ ಜೂನ್ 27: ಸಿಬಿಲ್ ಕ್ರೆಡಿಟ್ ಸ್ಕೋರ್ ಲೋನ್ ತೆಗೆಯುವ ವೇಳೆ ಮಾತ್ರ ಉಪಯೋಗಕ್ಕೆ ಬರುತ್ತದೆ ಎಂದು ನಂಬಿದ್ರೆ ನಿಮ್ಮ ಊಹೆ ಸುಳ್ಳು. ಇದೀಗ ಸಿಬಿಲ್ ಸ್ಕೋರ್ ನಿಮ್ಮ ಕೆಲಸಕ್ಕೂ ಬಹುಮುಖ್ಯ ಎನ್ನುವುದು ಇದೀಗ ಸಾಭೀತಾಗಿದೆ. ನೆಗೆಟಿವ್ ಸಿಬಿಲ್ ಸ್ಕೋರ್ ಹೊಂದಿದ್ದ ವ್ಯಕ್ತಿಗೆ ಎಸ್ ಬಿಐ ಬ್ಯಾಂಕ್ ತಾನು ನೀಡಿದ್ದ ನೇಮಕಾತಿಯನ್ನು ರದ್ದುಗೊಳಿಸಿದ ಅಪರೂಪದ ಘಟನೆ ನಡೆದಿದ್ದು, ಮದ್ರಾಸ್ ಹೈಕೋರ್ಟ್ ಕೂಡ ಎಸ್ ಬಿಐ ಕ್ರಮಕ್ಕೆ ಮಧ್ಯ ಪ್ರವೇಶಿಸಲು ನಿರಾಕರಿಸಿದೆ.
ಕಾರ್ತಿಕೇಯನ್ ಎಂಬ ಯುವಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗೆ ಪರೀಕ್ಷೆಗಳು, ಸಂದರ್ಶನಗಳು ಮತ್ತು ವೈದ್ಯಕೀಯ ತಪಾಸಣೆಗಳು ಸೇರಿದಂತೆ ಎಲ್ಲಾ ಹಂತಗಳ ನೇಮಕಾತಿಯಲ್ಲಿ ಉತ್ತೀರ್ಣರಾಗಿದ್ದ, ಆದರೆ ಆತನ ಸಿಬಿಲ್ ಸ್ಕೂರ್ ಮಾತ್ರ ನೆಗೆಟಿವ್ ಆಗಿತ್ತು. ಈ ಹಿನ್ನಲೆ ಬ್ಯಾಂಕ್ ಆತನ ನೇಮಕಾತಿಯನ್ನು ರದ್ದುಗೊಳಿಸಿತ್ತು. ಇದನ್ನು ಕಾರ್ತಿಕೇಯನ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

‘ಸಿಬಿಲ್ ವರದಿ ಪ್ರಕಾರ, ಕಾರ್ತಿಕೇಯನ್ ಆರ್ಥಿಕ ಅಶಿಸ್ತು ಹೊಂದಿರುವುದು ಕಂಡುಬಂದಿದೆ. ಉದ್ಯೋಗದಾತ ಸಂಸ್ಥೆಯು ಪ್ರಕಟಿಸಿದ್ದ ನೇಮಕಾತಿ ನಿಯಾಮವಳಿ ಪ್ರಕಾರ, ನೇಮಕಾತಿಗೂ ಮೊದಲೇ ಅರ್ಜಿದಾರರಿಗೆ ಉದ್ಯೋಗದ ಅರ್ಹತೆಯ ಷರತ್ತುಗಳನ್ನು ಸ್ಪಷ್ಟಪಡಿಸಲಾಗಿತ್ತು’ ಎಂದು ಎಸ್‌ಬಿಐ ಪರ ವಕೀಲರು ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ತಿಯೇನ್ ಪರ ವಕೀಲರು, ‘ಹುದ್ದೆಯ ಅಧಿಸೂಚನೆ ಹೊರಡಿಸುವ ವೇಳೆ ಅರ್ಜಿದಾರರ ಯಾವುದೇ ಬಾಕಿ ಅಥವಾ ಸಿಬಿಲ್ ಪ್ರತಿಕೂಲ ವರದಿ ಹೊಂದಿರಲಿಲ್ಲ. ಅಲ್ಲದೇ, ಕ್ರೆಡಿಟ್ ಕಾರ್ಡ್ ಎಲ್ಲ ಬಾಕಿಯನ್ನು ಪಾವತಿಸಿದ್ದು, ಸಿಬಿಲ್ ಕೂಡ ಬಾಕಿದಾರ ಎಂದು ಪರಿಗಣಿಸಿಲ್ಲ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಮಾಲಾ, ‘ಸಾಲ ಮರುಪಾವತಿ ಅತ್ಯಂತ ಕೆಟ್ಟ ಇತಿಹಾಸ ಹಾಗೂ ಕಡಿಮೆ ಸಿಬಿಲ್ ಸ್ಕೋರ್ ಹೊಂದಿದ ಕಾರಣ, ಅರ್ಜಿದಾರರ ನೇಮಕಾತಿಯನ್ನು ರದ್ದುಗೊಳಿಸಿದ್ದನ್ನು ಎಸ್‌ಬಿಐ ಸಮರ್ಥಿಸಿಕೊಂಡಿದೆ. ಈ ವಿಷಯದಲ್ಲಿ ನಡೆದ ವಿಚಾರಣೆ ಆಧರಿಸಿ, ಅರ್ಜಿದಾರರ ರಿಟ್ ಅರ್ಜಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ, ಹೀಗಾಗಿ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.