DAKSHINA KANNADA
ದ. ಕ. ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆ : ಜಾರು ಬಂಡಿಯಾದ ದೇರಳಕಟ್ಟೆರಸ್ತೆ

ದ. ಕ. ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆ : ಜಾರು ಬಂಡಿಯಾದ ದೇರಳಕಟ್ಟೆರಸ್ತೆ
ಪುತ್ತೂರು/ಮಂಗಳೂರು, ಎಪ್ರಿಲ್ 08 : ಬಿರು ಬಿಸಿಲಿನ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ.

ಬೆಳ್ತಂಗಡಿ ತಾಲೂಕಿನ ಕರಿಮಣೇಲು ಎಂಬಲ್ಲಿ ಆಲಿಕಲ್ಲು ಮಳೆಯಾದ ಬಗ್ಗೆ ವರದಿಯಾಗಿದೆ.
ಆನೇಕ ಕಡೆ ಗುಡುಗು ಸಹಿತ ಜೋರಾಗಿ ಮಳೆಯಾಗುತ್ತಿದೆ. ಮಂಗಳೂರು ನಗರದಲ್ಲೂ ಸಿಡಿಲು – ಗುಡುಗು ಸಹಿತ ಮಳೆಯಾಗುತ್ತಿದ್ದು, ಬಿರು ಬೇಸಿಗೆಯ ಸುಡು ಬಿಸಿಲಿನಿಂದ ಬಸವಳಿದಿದ್ದ ಮಂಗಳೂರಿನ ಜನತೆಗೆ ಮಳೆ ಕೊಂಚ ತಂಪರೆಯಿತು.
ಮಳೆಯಿಂದ ಅಲ್ಲಲ್ಲಿ ಮರಗಳು ಉರುಳಿ ಬಿದ್ದು, ರಸ್ತೆ ಸಂಚಾರಕ್ಕೆ ತೊಡಕಾಗಿದೆ.
ಮಂಗಳೂರು ಹೊರ ವಲಯದ ದೇರಳಕಟ್ಟೆ ನಿಟ್ಟೆ ಆಸ್ಪತ್ರೆ ಎದುರು ನಡೆಯುತ್ತಿರುವ ಹೆದ್ಧಾರಿ ಅಗಲೀಕರಣ ಕಾಮಗಾರಿಯಿಂದ ರಸ್ತೆಯಲ್ಲಿದ್ದ ಮಣ್ಣು ಇಂದು ಸುರಿದ ಮಳೆಗೆ ಕೆಸರಾಗಿದ್ದು, ಆನೇಕ ದ್ವಿಚಕ್ರವಾಹನ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯೆಲ್ಲ ಕೆಸರುಮಯವಾದ ಕಾರಣ ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಮಂಗಳೂರಿಗೆ ತೆರಳುವ ವಾಹನಗಳೆಲ್ಲವೂ ಮಾಡೂರು ರಸ್ತೆಯಾಗಿ ಸಂಚರಿಸುತ್ತಿವೆ.
ಸ್ಥಳಕ್ಕೆ ಸಂಚಾರಿ ಪೋಲಿಸ್ ಅಧಿಕಾರಿಗಳು ತೆರಳಿದ್ದು, ಜೆಸಿಬಿ ತರಿಸಿ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.