KARNATAKA
ಹಾಸನದಲ್ಲಿ ಪ್ರಜ್ವಲಿಸಿದ ಪೆನ್ ಡ್ರೈವ್, ಲೈಂಗಿಕ ಕಿರುಕುಳ ಆರೋಪದಡಿ HD ರೇವಣ್ಣ, ಪ್ರಜ್ವಲ್ ವಿರುದ್ಧ ಮನೆ ಕೆಲಸದಾಕೆ ದೂರು..!
ಹಾಸನ : ರಾಜ್ಯಾದ್ಯಾಂತ ತೀವ್ರ ಸಂಚಲನ ಮೂಡಿಸಿದ್ದ ಪೆನ್ ಡ್ರೈವ್ ಪ್ರಕರಣ ಹೊಸ ತಿರುವುಗಳನ್ನು ಪಡೆಯುತ್ತಿದ್ದು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ರೇವಣ್ಣರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಎಚ್.ಡಿ.ರೇವಣ್ಣ ಒಂದನೇ ಆರೋಪಿ ಮತ್ತು ಪ್ರಜ್ವಲ್ ರೇವಣ್ಣ ಎರಡನೇ ಆರೋಪಿಯಾಗಿದ್ದಾರೆ. 47 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದು, ಪೊಲೀಸರು ಐಪಿಸಿ 1860 (ಯು/ಎಸ್ 354 (ಎ), 354(ಡಿ), 506, 509ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಅವರನ್ನು ಪ್ರಥಮ (ಎ 1)ಆರೋಪಿ, ಪ್ರಜ್ವಲ್ ರೇವಣ್ಣ ಅವರನ್ನು ದ್ವಿತೀಯ (ಎ 2) ಆರೋಪಿಯನ್ನಾಗಿ ಮಾಡಲಾಗಿದೆ.
ದೂರಿನಲ್ಲಿ ಇರುವುದೇನು?
2015 ರಲ್ಲಿ ಎಚ್.ಡಿ.ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ನೀಡಿದ್ದಾರೆ. ತಂದೆ ಮತ್ತು ಮಗನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎಚ್.ಡಿ.ರೇವಣ್ಣ ಅವರು ಹಾಸ್ಟೆಲ್‌ವೊಂದರಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. 2013ರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಗಾಗ್ಗೆ ಮನೆಗೆ ಬರುವಂತೆ ಹೇಳುತ್ತಿದ್ದರು. ಭವಾನಿ ರೇವಣ್ಣ ನನ್ನ ಸೋದರತ್ತೆ ಮಗಳು. 2015ರಲ್ಲಿ ರೇವಣ್ಣರ ಮಾತಿನಂತೆ ಹಾಸ್ಟೆಲ್ ಕೆಲಸಕ್ಕೆ ಸೇರಿಕೊಂಡಿದ್ದೆ. ಅದಾದ ನಾಲ್ಕು ವರ್ಷಗಳ ನಂತರ ಅವರ ಮೊದಲನೇ ಪುತ್ರ ಸೂರಜ್ ರೇವಣ್ಣ ಮದುವೆ ಸಮಯದಲ್ಲಿ ಮನೆಯ ಕೆಲಸ ಮಾಡುವಂತೆ ಕರೆಸಿಕೊಂಡಿದ್ದರು. ಅಲ್ಲಿ ಮೂರೂವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದೆ. ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳ ನಂತರ ರೇವಣ್ಣ ಅವರು ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸುತ್ತಿದ್ದರು.
ಮನೆಯಲ್ಲಿ 6 ಜನ ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದರು. ಎಲ್ಲರೂ ಪ್ರಜ್ವಲ್ ರೇವಣ್ಣ ಅವರು ಬಂದಾಗ ನಮಗೆ ಭಯವಾಗುತ್ತದೆ ಎಂದು ಹೇಳುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗರು ಸಹ ನನಗೆ ಮತ್ತು ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳಿಗೆ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಿದ್ದರು. ಭವಾನಿ ಅವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ರೇವಣ್ಣ ಅವರು ಸ್ಟೋರ್ ರೂಮ್‌ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ.
2019ರಿಂದ 2022ರ ವರೆಗೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ರೇವಣ್ಣ ತನ್ನ ಮಗಳಿಗೆ ಹಲವು ಬಾರಿ ವೀಡಿಯೋ ಕರೆ ಮಾಡಿ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ಮಾಡುತ್ತಿದ್ದು, ಹೆದರಿದ್ದ ತನ್ನ ಮಗಳು ನಂಬರ್ ಬ್ಲಾಕ್ ಮಾಡಿದ್ದಳು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪ್ರಜ್ವಲ್ ರೇವಣ್ಣ ಎಸಗಿದ್ದಾರೆ ಎನ್ನಲಾದ ವೀಡಿಯೋಗಳು ಇತ್ತೀಚೆಗೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದರಿಂದ ಮಾನಸಿಕ ಹಿಂಸೆ ಆಗುತ್ತಿದೆ. ಹೀಗಾಗಿ ತನ್ನ ಮತ್ತು ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್.ಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ.