LATEST NEWS
ಪ್ರಾಯೋಗಿಕ ಕೊವಾಕ್ಸಿನ್ ಲಸಿಕೆ ಪಡೆದರೂ….ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ರಿಗೆ ಕೊರೊನಾ
ಚಂಡೀಗಢ: ದೇಶ ಕೊರೊನಾ ಲಸಿಕೆ ಪಡೆಯುವ ದಾವಂತದಲ್ಲಿರುವಂತೆ ಒಂದು ಕೆಟ್ಟ ಸುದ್ದಿ ಹೊರ ಬಿದ್ದಿದ್ದು, ಭಾರತ್ ಬಯೋಟೆಕ್ ಅಭಿವೃದ್ದಿ ಪಡಿಸಿದ್ದ ಕೋವಾಕ್ಸಿನ್ ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿದೆ.
ಇಂದು ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡ ಅನಿಲ್ ವಿಜ್ ಅವರು ಕೋವಿಡ್ ಪಾಸಿಟಿವ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ತಮ್ಮ ಸಂಪರ್ಕದಲ್ಲಿದ್ದವರು ಕರೊನಾ ಪರೀಕ್ಷೆ ಮಾಡಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಅಲ್ಲದೆ, ಸಚಿವರು ಅಂಬಾಲದಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮೊದಲು ವಿಜ್ ಅವರು ನವೆಂಬರ್ 20ರಂದು ಕೋವಾಕ್ಸಿನ್ ಹೆಸರಿನ ಕೋವಿಡ್ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು.
ನಿನ್ನೆ ಅಷ್ಟೆ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆ ಕೊನೆಯ ಹಂತದಲ್ಲಿದ್ದು, ವಿಜ್ಞಾನಿಗಳಿಂದ ಗ್ರೀನ್ ಸಿಗ್ನಲ್ ದೊರೆತ ಕೂಡಲೇ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದ್ದರು. ಈಗಾಗಲೇ ಭಾರತ್ ಬಯೋಟೆಕ್ ಅಭಿವೃದ್ದಿ ಪಡಿಸಿರುವ ಕೊವಾಕ್ಸಿನ್ ಕರೊನಾ ವಿರುದ್ಧ ಪರಿಣಾಮಕಾರಿ ಫಲಿತಾಂಶ ನೀಡುತ್ತಿದೆ ಎಂದು ಹೇಳಲಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಕಂಪನಿಯೂ ಅಭಿವೃದ್ಧಿ ಪಡಿಸುತ್ತಿದೆ. ಈಗ ಲಸಿಕೆ ಪಡೆದರೂ ಕೊರೊನಾ ಮತ್ತೆ ಬಂದಿರುವುದು ..ನಿರಾಸೆಯನ್ನು ಮೂಡಿಸಿದೆ.