BELTHANGADI
ಬೆಳ್ತಂಗಡಿ – ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದ ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ ಅಗಸ್ಟ್ 17: ತನ್ನದೇ ಕ್ಷೇತ್ರದ ಜನರಿಗೆ ಶಾಸಕ ಹರೀಶ್ ಪೂಂಜಾ ಅವಾಚ್ಯ ಶಬ್ದಗಳಿಂದ ಬೈದು, ಬಳಿಕ ಪ್ರಶ್ನೆ ಮಾಡಿದರೆ ದೇವರ ಮೇಲೆ ಇಡುತ್ತೇನೆ ಎಂದು ದೇವರ ಹೆಸರಿನಲ್ಲಿ ಹೆದರಿಸಿದ ಘಟನೆ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಾಣಾಲು ಗ್ರಾಮದ ಪಿಲಿಕಲ ರಸ್ತೆ ಬಿರುಕು ಬಿಟ್ಟು ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ಇಲ್ಲಿಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಸ್ಥಳೀಯ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ತಡವಾಗಿ ಭೇಟಿ ನೀಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಈ ವೇಳೆ ಕ್ಷೇತ್ರದ ಜನರ ಜೊತೆಗೂ ಶಾಸಕ ಹರೀಶ್ ಪೂಂಜಾ ಕಿರಿಕ್ ಮಾಡಿಕೊಂಡಿದ್ದಾರೆ.
MLAಗೆ ಏಕೆ ತಡವಾಗಿ ಬಂದೆ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ’ ಆ ರೀತಿ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದು ಪ್ರಶ್ನೆ ಮಾಡಿದ ಜನರಿಗೆ ದೇವರ ಹೆಸರಲ್ಲಿ ಹರೀಶ್ ಪೂಂಜಾ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವರ್ತನೆಗೆ ಗ್ರಾಮದ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಶಾಸಕನನ್ನ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ನಾಯಿ ಎಂದು ಅವಾಚ್ಯವಾಗಿ ಶಾಸಕ ಪೂಂಜಾ ನಿಂದಿಸಿದ್ದಾರೆ. ಇದರಿಂದಾಗಿ ಗ್ರಾಮದ ಜನರು ಕೆಂಡಾ ಮಂಡಲರಾಗಿ ಹರೀಶ್ ಪೂಂಜಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾಸಕರನ್ನು ಪ್ರಶ್ನೆ ಮಾಡಿದವರಿಗೆ ನಾಯಿ **** ಎಂದು ಅವಾಚ್ಯವಾಗಿ ನಿಂದಿಸಿ, ಅನುದಾನ ಬೇಕಾದ್ರೆ ಇಡುತ್ತೇನೆ ಆದರೆ ಅಂತಹ ***** ಮಕ್ಕಳನ್ನ ಕರೆದುಕೊಂಡು ಬಂದರೆ ಜಾಗ್ರತೆ ಎಂದ ಶಾಸಕ ಪೂಂಜಾ, ಈ ವೇಳೆ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿಯಾಗಿದ್ದು, ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಸ್ಥಳದಿಂದ ಶಾಸಕರ ಹರೀಶ್ ಪೂಂಜಾ ತೆರಳಿದ್ದಾರೆ.
You must be logged in to post a comment Login