National
ಕೊರೊನಾ ಹಿನ್ನಲೆ ಈ ಬಾರಿಯ ಹಜ್ ಯಾತ್ರೆ ರದ್ದು
ನವದೆಹಲಿ: ಪ್ರಪಂಚದಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಈ ಭಾರಿಯ ಹಜ್ ಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಹಜ್ ಯಾತ್ರೆಗೆ ಭಾರತದಿಂದ ಯಾರ್ಥಾತ್ರಿಗಳನ್ನು ಕಳುಹಿಸದಂತೆ ಸೌದಿ ಅರೇಬಿಯಾದ ಸಚಿವ ಡಾ. ಮೊಹಮ್ಮದ್ ಸಲೇಹ್ ಬಿನ್ ತಾಹೆರ್ ಬೆಂಟನ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಯಾತ್ರೆ ರದ್ದುಗೊಳಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ದೂರವಾಣಿ ಕರೆ ಮಾಡಿದ್ದ ಡಾ. ಮೊಹಮ್ಮದ್ ಸಲೇಹ್ ಬಿನ್ ತಾಹೆರ್ ಬೆಂಟನ್, ಹಜ್ ಯಾತ್ರೆಗೆ ಅವಕಾಶ ನೀಡಿದರೆ ಸೋಂಕು ಹೆಚ್ಚಾಗಬಹುದು. ಇದರಿಂದ ಎರಡು ದೇಶಗಳಿಗೆ ಅಪಾಯ ಎದುರಾಗಬಹುದು ಹೀಗಾಗಿ ಈ ಬಾರಿ ಭಾರತದಿಂದ ಯಾತ್ರೆಗೆ ಯಾತ್ರಿಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ ಎಂದು ಸಚಿವ ನಕ್ವಿ ತಿಳಿಸಿದರು.
ಭಾರತದಲ್ಲಿ ಈವರೆಗೂ 2.13 ಲಕ್ಷ ಅರ್ಜಿಗಳು ಹಜ್ ಯಾತ್ರೆಗೆ ಸ್ವೀಕೃತಗೊಂಡಿದೆ. ಯಾತ್ರೆ ರದ್ದಾದ ಕಾರಣ ಅವರ ಹಣವನ್ನು ದಂಡ ಶುಲ್ಕವಿಲ್ಲದೇ ಮರುಪಾವತಿಸುವ ಪ್ರಕ್ರಿಯೆ ನಡೆದಿದೆ ಎಂದರು. ಈ ವರ್ಷ 2,300ಕ್ಕೂ ಹೆಚ್ಚು ಮಹಿಳೆಯರು ಮೆಹ್ರಾಮ್ ಇಲ್ಲದೆ ಹಜ್ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಮಹಿಳೆಯರಿಗೆ ಹಜ್ 2020ಗೆ ಅರ್ಜಿ ಸಲ್ಲಿಸಿದ ಆಧಾರದ ಮೇಲೆ ಹಜ್ 2021ಗೆ ಹೋಗಲು ಅವಕಾಶವಿರುತ್ತದೆ. ಅಲ್ಲದೆ ಹೊಸ ಅರ್ಜಿ ಸಲ್ಲಿಸುವ ಮಹಿಳೆಯರಿಗೂ ಮುಂದಿನ ವರ್ಷ ಹಜ್‍ಗೆ ಹೋಗಲು ಅವಕಾಶವಿರುತ್ತದೆ ಎಂದು ಸ್ಪಷ್ಟನೆ ನೀಡಿದರು.