LATEST NEWS
ಗುರುಪುರ – ಖಾಸಗಿ ಬಸ್ ಪಲ್ಟಿ – ಏಳು ಮಂದಿ ಪ್ರಯಾಣಿಕರಿಗೆ ಗಾಯ

ಗುರುಪುರ ಜನವರಿ 02 : ಕಟೀಲಿನಿಂದ ಬಿ.ಸಿ.ರೋಡ್‌ಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕ ನಿಯಂತ್ರಣ ತಪ್ಪಿ ಗುರುಪುರ ಕೈಕಂಬದ ಬಳಿ ಪೊಳಲಿ ದ್ವಾರದ ಇಳಿಜಾರು ರಸ್ತೆಯಲ್ಲಿ ಪಲ್ಟಿಯಾದ ಘಟನೆ ನಡೆದಿದೆ. ಈ ಅಪಘಾತದಲ್ಲಿ 7 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಸಂಜೆ ವೇಳೆಯಾಗಿದ್ದರಿಂದ ಬಸ್‌ನಲ್ಲಿ ಪೂರ್ತಿ ಪ್ರಯಾಣಿಕರಿದ್ದು ಪೊಳಲಿ ದ್ವಾರದ ಬಳಿ ಜನರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ಆದರೆ ಇಳಿಜಾರು ಪ್ರದೇಶದಲ್ಲಿ ಒಮ್ಮೆಲೆ ಚಲಿಸಿದೆ. ಆ ಕೂಡಲೆ ಬಸ್ ಚಾಲಕನ ಚಾಕಚಕ್ಯತೆಯಿಂದ ಬಸ್ ನ್ನು ಬಲಗಡೆಗೆ ತಿರುಗಿಸಿದ್ದಾನೆ.

ಆದರೆ ಚಾಲಕ ಬಲಗಡೆಗೆ ತಿರುಗಿಸಿದ್ದರಿಂದ ಮುಂಭಾಗದ ದರೆಗೆ ಬಡಿದು ಪಲ್ಟಿಯಾಗಿದೆ. ಬಸ್‌ನಲ್ಲಿ ಶಾಲಾ -ಕಾಲೇಜು ವಿದ್ಯಾರ್ಥಿಗಳು, ಕೆಲಸದಿಂದ ಮನೆಗೆ ಬರುವವರೇ ಹೆಚ್ಚಾಗಿದ್ದು ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವೇಳೆ ಬಸ್ ಎಡಗಡೆಗೆ ಚಲಿಸಿದ್ದರೆ ಆಳವಾದ ಕಂದಕಕ್ಕೆ ಉರುಳಿ ಬೀಳುವ ಸಾಧ್ಯತೆ ಇತ್ತು. ಆಳಕ್ಕೆ ಇಳಿದಿದ್ದರೆ ಅಷ್ಟೂ ಜನ ಪ್ರಯಾಣಿಕರು ಅಪಾಯಕ್ಕೆ ಸಿಲುಕುತ್ತಿದ್ದರು. ಸುಮಾರು ಒಂದೂವರೆ ಗಂಟೆಯಷ್ಟು ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಜ್ಪೆ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಎರಡು ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಯಿತು.