LATEST NEWS
ಗುರುಪುರ ಸೇತುವೆ ತಪಾಸಣೆ – 5 ತಾಸು ಸೇತುವೆ ಬಂದ್

ಗುರುಪುರ ಸೇತುವೆ ತಪಾಸಣೆ – 5 ತಾಸು ಸೇತುವೆ ಬಂದ್
ಮಂಗಳೂರು ಜೂನ್ 28: ಮೊನ್ನೆಯಷ್ಟೆ ಬಂಟ್ವಾಳ ತಾಲೂಕಿನ ಮುಲ್ಲರಪಟ್ನದಲ್ಲಿ ಸೇತುವೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಎಚ್ಚತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಈಗ ಮಂಗಳೂರಿನ ಹಳೇ ಸೇತುವೆಗಳ ಪರಿಶೀಲನೆ ಆರಂಭಿಸಿದ್ದಾರೆ.
ಮಂಗಳೂರು – ಮೂಡುಬಿದಿರೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಗುರುಪುರದಲ್ಲಿರುವ ನೂರು ವರ್ಷಕ್ಕಿಂತಲೂ ಹಳೆಯ ಬ್ರಿಟಿಷರ ಕಾಲದ ಸೇತುವೆಯನ್ನು ಬಾಹ್ಯ ಪರಿಶೀಲನೆಯನ್ನು ನಿನ್ನೆ ಲೋಕೋಪಯೋಗಿ ಇಂಜಿನಿಯರಿಂಗ್ ಇಲಾಖೆಯ ತಾಂತ್ರಿಕ ಸಮಿತಿ ನಡೆಸಿದೆ. ಇಂದು ಸೇತುವೆ ತಳಭಾಗದ ಸ್ಥಿತಿ ತಪಾಸಣೆ ಕೈಗೊಂಡಿದೆ. ಸೇತುವೆ ತಪಾಸಣಾ ವಾಹನ ನಿನ್ನೆ ರಾತ್ರಿ ಮಂಗಳೂರಿಗೆ ಆಗಮಿಸಿದೆ. ಇಂದು ಬೆಳಿಗ್ಗೆಯಿಂದ ಅಧಿಕಾರಿಗಳು ಸೇತುವೆ ತಪಾಸಣೆಯಲ್ಲಿ ತೊಡಗಿದ್ದಾರೆ.

ಸೇತುವೆ ತಪಾಸಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂದು ಬೆಳಗ್ಗಿನಿಂದ ಸಂಚಾರ ನಿಷೇಧಿಸಲಾಗಿದೆ. ಈ ಸೇತುವೆ ಬಗ್ಗೆ ಜನರಲ್ಲಿ ಆತಂಕ ಇದ್ದರೂ, ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಈಗ ಮುಲ್ಲರಪಟ್ನ ಸೇತುವೆ ಕುಸಿದಾಗ, ಅಧಿಕಾರಿಗಳು ಎಚ್ಚತ್ತುಕೊಂಡಿದ್ದು ಸಾಮರ್ಥ್ಯ ಪರಿಶೀಲನೆ ಆರಂಭಿಸಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಮಂದಿಗೆ ಬದಲಿ ಮಾರ್ಗವಾಗಿ ವಾಮಂಜೂರು – ಪಚ್ಚನಾಡಿ – ಬೋಂದೇಲ್ – ಕಾವೂರು – ಬಜಪೆ – ಕೈಕಂಬ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.