Connect with us

    FILM

    ಬಂದೂಕುಗಳು ಕಾಯುತ್ತಿವೆ, ಆತಂಕವಾಗುತ್ತಿದೆ: ಸಲ್ಮಾನ್ ಖಾನ್

    ಮುಂಬೈ, ಮೇ 01: ಲಾರೆನ್ಸ್ ಬಿಷ್ಣೋಯ್ ಅಂಡ್ ಗ್ಯಾಂಗ್ ಜೀವ ಬೆದರಿಕೆ ಹಾಕಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಸಲ್ಮಾನ್ ಖಾನ್, ‘ನನ್ನನ್ನು ಬಂದೂಕುಗಳು ಕಾಯುತ್ತಿವೆ. ಸಾಕಷ್ಟು ಭಯದಲ್ಲಿ ಬದುಕುತ್ತಿರುವೆ. ಯಾಕೆ ಅವರು ನನಗೆ ಗನ್ ಪಾಯಿಂಟ್ ಇಡುತ್ತಿದ್ದಾರೆ ಎನ್ನುವುದು ಇನ್ನೂ ಅರ್ಥವಾಗುತ್ತಿಲ್ಲ. ಮುಗಿದು ಹೋದ ಪ್ರಕರಣವನ್ನು ಮತ್ತೆ ಮತ್ತೆ ಕೆದುಕುತ್ತಿದ್ದಾರೆ’ ಎಂದಿದ್ದಾರೆ.

    ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು  ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

    ಈಗಾಗಲೇ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply