LATEST NEWS
ಪ್ಲಾಸ್ಟಿಕ್ ವಿರುದ್ಧ ‘ಗುಲಾಬಿ ಅಭಿಯಾನ’
ಪ್ಲಾಸ್ಟಿಕ್ ವಿರುದ್ಧ ‘ಗುಲಾಬಿ ಅಭಿಯಾನ’
ಉಡುಪಿ ಜುಲೈ 11 :- ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯ ಅಪಾಯದ ಬಗ್ಗೆ ಅರಿವು ಮೂಡಿಸಲು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಂದ ಉಡುಪಿ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಲ್ಲಿ ಗುಲಾಬಿ ಅಭಿಯಾನ ಎಂಬ ಕಾರ್ಯಕ್ರಮ ಜುಲೈ 13 ರಿಂದ ನಡೆಯಲಿದೆ.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಈ ವಿಷಯ ತಿಳಿಸಿದರು. ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆ ಅಂಗಡಿ, ಕಾರ್ಖಾನೆ ಮತ್ತಿತರ ವಾಣಿಜ್ಯ ಸಂಸ್ಥೆಗಳಿಂದ ನಡೆಯುತ್ತಿವೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರತೀ ಪ್ರೌಢಶಾಲೆಯ ವತಿಯಿಂದ ಆಯಾ ಶಾಲಾ ವ್ಯಾಪ್ತಿಯ 15-20 ಅಂಗಡಿ, ಉದ್ದಿಮೆಗಳನ್ನು ಗುರುತಿಸಲಾಗುವುದು. ಇದಕ್ಕಾಗಿ ಆಯಾ ಪ್ರೌಢಶಾಲೆಗಳಿಂದ ತಲಾ 6 ವಿದ್ಯಾರ್ಥಿಗಳ ತಂಡವನ್ನು ರಚಿಸಲಾಗುವುದು. ಈ ತಂಡದಲ್ಲಿ ಒಬ್ಬರು ಶಿಕ್ಷಕರು ಮತ್ತು ಗ್ರಾ.ಪಂ. ಸಿಬ್ಬಂದಿಗಳಿರಲಿದ್ದಾರೆ. ಈ ತಂಡವು ಪ್ರತೀ ಅಂಗಡಿಗೆ ಹೋಗಿ ಒಂದು ಗುಲಾಬಿ, ಕರಪತ್ರ ಹಾಗೂ ಸ್ಟಿಕ್ಕರನ್ನು ಅಂಗಡಿ ಮಾಲಕರಿಗೆ ನೀಡಿ ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ಮನವರಿಕೆ ಮಾಡಲಿದೆ ಎಂದು ಅವರು ಹೇಳಿದರು.
ನಂತರ ಪ್ರತೀ ಶನಿವಾರದಂದು ತಂಡವು ಅದೇ ಅಂಗಡಿಗೆ ಹೋಗಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಗಮನಹರಿಸಲಿದೆ. ಒಟ್ಟು 3 ಶನಿವಾರ ಇದು ನಡೆಯಲಿದೆ ಎಂದು ಅವರು ಹೇಳಿದರು. ಈ ಅಭಿಯಾನಕ್ಕೆ ಎಲ್ಲಾ ಜನಪ್ರತಿನಿಧಿಗಳು, ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಸಹಕರಿಸಬೇಕು ಎಂದು ನಾಗೇಶ್ ರಾಯ್ಕರ್ ತಿಳಿಸಿದರು.