LATEST NEWS
ಇಮೇಜ್ ಸ್ಟೋರ್ ಇಲ್ಲದಿದ್ದರೆ ಸ್ಕ್ಯಾನಿಂಗ್ ಸೆಂಟರ್ ನಡೆಸಲು ಅವಕಾಶ ಇಲ್ಲ: ಡಾ.ರೋಹಿಣಿ
ಇಮೇಜ್ ಸ್ಟೋರ್ ಇಲ್ಲದಿದ್ದರೆ ಸ್ಕ್ಯಾನಿಂಗ್ ಸೆಂಟರ್ ನಡೆಸಲು ಅವಕಾಶ ಇಲ್ಲ: ಡಾ.ರೋಹಿಣಿ
ಉಡುಪಿ ಫೆಬ್ರವರಿ 21: ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಇಮೇಜ್ ಸ್ಟೋರ್ ಮಾಡುವುದು ಸಾಧ್ಯವಿಲ್ಲ ಎಂದಾದರೆ ಅಂಥಹ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದರು.
ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಡಾ.ಪ್ರತಾಪ್ ಕುಮಾರ್ ಇವರ ಅಧ್ಯಕ್ಷ್ಯತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕಡ್ಡಾಯವಾಗಿ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳು ಸ್ಕಾನಿಂಗ್ ಮಾಡಿದ ಇಮೇಜ್‍ಗಳನ್ನು ಎರಡು ವರ್ಷಗಳ ಕಾಲಾವಧಿಗೆ ಕಾಯ್ದಿರಿಸಲು ತಾಂತ್ರಿಕ ವ್ಯವಸ್ಥೆ ಇರಬೇಕು. ಅಂತಹ ವ್ಯವಸ್ಥೆ ಇಲ್ಲದಿದ್ದರೆ ಸ್ಕ್ಯಾನಿಂಗ್ ಸೆಂಟರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಒಂದು ಸಮೀಕ್ಷೆಯನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಬಗ್ಗೆ ಇಲಾಖೆಗೆ ದೊರೆತ ಮಾಹಿತಿಯನ್ವಯ ನಿಗದಿತ ಪ್ರದೇಶಗಳನ್ನು ಗಮನದಲ್ಲಿರಿಸಿ ರಾಂಡಮ್ ಸಮೀಕ್ಷೆ ಮಾಡುವ ಬಗ್ಗೆಯೂ ಡಿಎಚ್‍ಒ ಸಂಬಂಧಪಟ್ಟವರಿಗೆ ಸೂಚನೆಯನ್ನು ನೀಡಿದರು.
ಈಗಾಗಲೇ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಸಾಕಷ್ಟು ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು, ಮುಂದಿನ ಭೇಟಿಯ ವೇಳೆ ಲೋಪಗಳು ಕಂಡುಬಂದರೆ ದಂಡ ಹಾಕುವುದರ ಜೊತೆಗೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ ರಾಮರಾವ್ ಅಧ್ಯಕ್ಷರು ಜಲ್ಲಾ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದರು.
ಕಾಯ್ದೆಯನ್ವಯ ಲೋಪಗಳನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಸ್ಕ್ಯಾನಿಂಗ್ ಸೆಂಟರ್ ನಡೆಸುವವರು ‘ಗೊತ್ತಿರಲಿಲ್ಲ’ ಎಂದು ಹೇಳುವುದು ಸಕಾರಣವೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದರು.