KARNATAKA
ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ…ಉಪನ್ಯಾಸಕರ ವೇತನವನ್ನು 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ
ಬೆಂಗಳೂರು ಜನವರಿ 14: ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದ್ದು, ಉಪನ್ಯಾಸಕರ ವೇತನವನ್ನು 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 13 ಸಾವಿರ ಇರೋರಿಗೆ 32 ಸಾವಿರ ನೀಡಲಾಗುತ್ತೆ. ಪೂರ್ಣ ಪ್ರಮಾಣದಲ್ಲಿ ವರ್ಕ್‍ಲೋಡ್ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ವಿವಿಧ ಭೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ವರದಿ ನೀಡಲು ಸಿಎಂ ಸಮಿತಿ ನೇಮಕ ಮಾಡಿದ್ದರು. ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ರು. ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ವರದಿಯನ್ನು ಸಿಎಂ ಗಮನಿಸಿ ವರದಿಯನ್ನ ಅನುಷ್ಠಾನ ಮಾಡಲು ಸಿಎಂ ಒಪ್ಪಿದ್ದಾರೆ.
2002 ರಿಂದ ಅತಿಥಿ ಉಪನ್ಯಾಸಕರು ಹುದ್ದೆ ಸೃಷ್ಟಿಯಾಗಿದೆ. 2012ರ ಮೊದಲು ಕಾಲೇಜುಗಳೇ ನೇಮಕ ಮಾಡುತ್ತಿತ್ತು. 2012 ರ ನಂತ್ರ ನಮ್ಮ ಇಲಾಖೆ ನೇಮಕ ಮಾಡುತ್ತಿದೆ. 5 ವರ್ಷ ಮೇಲ್ಪಟ್ಟು ಸೇವೆ ಮಾಡಿದ ಯುಜಿಸಿ ಕ್ವಾಲಿಫಿಕೇಶನ್ ಇರೋರಿಗೆ 32 ಸಾವಿರ ಕೊಡ್ತೀವಿ. 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸದ ಯುಜಿಸಿ ಕ್ವಾಲಿಫಿಕೇಶನ್ ಇರೋ ಅತಿಥಿ ಉಪನ್ಯಾಸಕರಿಗೆ 30 ಸಾವಿರ, 5 ವರ್ಷ ಸೇವೆ ಹೆಚ್ಚು ಸೇವೆ ಸಲ್ಲಿಸಿದ ಯುಜಿಸಿ ಕ್ವಾಲಿಫಿಕೇನ್ ಇಲ್ಲದವರಿಗೆ 28 ಸಾವಿರ, 5 ವರ್ಷ ಸೇವೆ ಇಲ್ಲದ ಯುಜಿಸಿ ಕ್ವಾಲಿಫಿಕೇಶನ್ ಇಲ್ಲದವರಿಗೆ 26 ಸಾವಿರ ಸಂಬಳ ನೀಡ್ತೀವಿ. ಪ್ರತಿ ತಿಂಗಳು 10 ರಂದು ಸಂಬಳ ಕೊಡ್ತೀವಿ ಎಂದು ಸಚಿವರು ಘೋಷಣೆ ಮಾಡಿದರು.