LATEST NEWS
ಗ್ರೀನ್ ಮಂಗಳೂರು ಪರಿಕಲ್ಪನೆಗೆ ಒತ್ತು – ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು ಜನವರಿ 07 : ನಗರದ ಅನೇಕ ಕಡೆಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ ಹಾಗೂ ಹೊಸ ಪಾರ್ಕ್ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಹಸಿರು ಉಳಿಸಿಕೊಂಡು ನಗರದ ಅಭಿವೃದ್ಧಿಗೆ ಚಿಂತನೆ ನಡೆಸುತ್ತಿದ್ದು ಗ್ರೀನ್ ಮಂಗಳೂರು ಪರಿಕಲ್ಪನೆಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನ ಆರ್.ಬಿ ಲೇಔಟ್ ನಲ್ಲಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕಾಮತ್, ಮೂಡದಿಂದ ನಗರದಲ್ಲಿರುವ ಪಾರ್ಕ್ ಗಳ ಅಭಿವೃದ್ಧಿ ಹಾಗೂ ಹೊಸದಾಗಿ ಪಾರ್ಕ್ ನಿರ್ಮಿಸಲು ಅನುದಾನ ಒದಗಿಸಲಾಗಿದ್ದು, ನಗರದ ಆಯ್ದ ಭಾಗಗಳಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.

ನಗರದ ಬೆಳವಣಿಗೆಯಂತೆ ಹಸಿರನ್ನು ಉಳಿಸುವ ದೃಷ್ಟಿಯಿಂದ ರೂಪುಗೊಂಡ ಗ್ರೀನ್ ಮಂಗಳೂರು ಪರಿಕಲ್ಪನೆಯನ್ನು ಸಾಕಾರಗೊಳಿಸಿ ಉದ್ಯಾನವನಗಳ ಜೊತೆಗೆ ಸಸ್ಯ ಸಂಪತ್ತನ್ನು ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಮಾತನಾಡಿ, ಶಾಸಕರ ಬೇಡಿಕೆಯಂತೆ ಪಾರ್ಕ್ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಈಗಾಗಲೇ ಕೆಲವೊಂದು ಕಾಮಗಾರಿಗಳು ನಡೆಯುತ್ತಿದೆ. ಮರೋಳಿ ಆರ್.ಬಿ ಲೇಔಟ್ ಪಾರ್ಕ್ ಅಭಿವೃದ್ಧಿಗೆ 25 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.