Connect with us

LATEST NEWS

ಕಾಮನ್‌ವೆಲ್ತ್‌ ಪದಕ ವಿಜೇತ ಗುರುರಾಜ ಪೂಜಾರಿಗೆ ಅದ್ಧೂರಿ ಸ್ವಾಗತ

ಉಡುಪಿ, ಆಗಸ್ಟ್ 08: ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಭಾನುವಾರ ತವರಿಗೆ ಮರಳಿದ ಕುಂದಾಪುರದ ಗುರುರಾಜ ಪೂಜಾರಿ ಅವರಿಗೆ ಜಿಲ್ಲಾಡಳಿತದ ಅದ್ಧೂರಿ ಸ್ವಾಗತ ಕೋರಿ ಸನ್ಮಾನಿಸಲಾಯಿತು.

ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಪೌರಾಯುಕ್ತ ಡಾ.ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕ್ರೀಡಾಪಟು ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ‘ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಕುಂದಾಪುರದ ಗುರುರಾಜ ಪೂಜಾರಿ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ದೇಶದಲ್ಲಿ ಉಡುಪಿ ಜಿಲ್ಲೆಯ ಹೆಸರನ್ನು ಪ್ರಖ್ಯಾತಗೊಳಿಸಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದ ಪ್ರತಿಭೆಗಳು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಉನ್ನತ ಸಾಧನೆ ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿರುವ ಗುರುರಾಜ್ ಪೂಜಾರಿ ಸಾಧನೆ ಜಿಲ್ಲೆಯ ಯುವಜನತೆ ಹಾಗೂ ಕ್ರೀಡಾಪಟುಗಳಿಗೆ ಸದಾ ಸ್ಪೂರ್ತಿ. ಜಿಲ್ಲೆಯಲ್ಲಿ ಉತ್ತಮ ಕ್ರೀಡಾಂಗಣ ಹಾಗೂ ಕ್ರೀಡಾ ಸೌಲಭ್ಯಗಳಿದ್ದು ಕ್ರೀಡಾಪಟುಗಳು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುರಾಜ ಪೂಜಾರಿ, ‘ಕಾಮನ್ ವೆಲ್ಸ್ ಗೇಮ್ಸ್‌ನಲ್ಲಿ ಪದಕ ಪಡೆಯುವ ಗುರಿಯಿಂದ 4 ವರ್ಷಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದೆ. ಬರ್ಮಿಂಗ್ ಹ್ಯಾಂಗೆ ತೆರಳಿದ ಬಳಿಕ ಅನಾರೋಗ್ಯ ಸಮಸ್ಯೆ ಕಾಡಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸುವುದು  ಅನುಮಾನವಾಗಿತ್ತು. ಆದರೆ ಕೋಚ್ ಮಾರ್ಗದರ್ಶನ, ಆತ್ಮವಿಶ್ವಾಸ ಹಾಗೂ ಎಲ್ಲರ ಹಾರೈಕೆಯಿಂದ ಗುಣಮುಖನಾಗಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು ಎಂದರು.

ವೇಯ್ಟ್ ಲಿಪ್ಟಿಂಗ್‌ನ 61 ಕೆಜಿ ವಿಭಾಗದಲ್ಲಿ ದೇಶಕ್ಕೆ ಮೊದಲ ಬಾರಿಗೆ ಪದಕ ಬಂದಿದ್ದು ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು. ಸಾಧನೆಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಕಳೆದ ಬಾರಿಯ ಕಾಮನ್‌ವೆಲ್ಸ್ ಗೇಮ್ಸ್‌ನಲ್ಲಿ ಪದಕ ಪಡೆದಾಗಲೂ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆ ನೀಡಿದ ಗೌರವ ಸ್ಮರಣೀಯ. ಕ್ರೀಡಾಪಟುಗಳು ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮ ಹಾಕಿದರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಕಿವಿಮಾತು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *