BELTHANGADI
ಗ್ರೆನೇಡ್ ಪತ್ತೆ ಪ್ರಕರಣ -ತನಿಖೆಗಾಗಿ ಭಾರತೀಯ ಆರ್ಡಿನೆನ್ಸ್ ಫ್ಯಾಕ್ಟರಿ, ಸೇನೆಯ ಜೊತೆ ಪತ್ರ ವ್ಯವಹಾರ

ಮಂಗಳೂರು ನವೆಂಬರ್ 07: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಬೇಲಿಯ ಬಳಿ ಐದು ಗ್ರೆನೇಡ್‌ಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾನೆ ಭಗವಾನ್ ಮಾಹಿತಿ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳ ತಂಡ ಗ್ರೆನೇಡ್ ಸ್ವಾಧೀನಪಡಿಸಿಕೊಂಡಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಿಯೇ ಗ್ರೆನೇಡ್ ವಶಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಾಗಿದೆ, ಗ್ರೆನೇಡ್ ಎಲ್ಲಿಂದ ಬಂದಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಭಾರತೀಯ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ, 1979 ರಿಂದ 1983 ವರೆಗಿನ ಉತ್ಪಾದನೆ ದಿನಾಂಕ ಕಂಡು ಬಂದಿದೆ, ಸುಮಾರು 40 ವರ್ಷ ಹಿಂದೆ ತಯಾರಾಗಿರು ಗ್ರೆನೇಡ್ ಇದಾಗಿದ್ದು, ಇಲ್ಲಿಗೆ ಎಲ್ಲಿಂದ ಬಂತು ಎಂಬ ತನಿಖೆಗಾಗಿ ಭಾರತೀಯ ಆರ್ಡಿನೆನ್ಸ್ ಫ್ಯಾಕ್ಟರಿ, ಸೇನೆಯ ಜೊತೆ ಪತ್ರ ವ್ಯವಹಾರ ನಡೆಸುತ್ತೇವೆ ಎಂದು ದಕ್ಷಿಣಕನ್ನಡ ಎಸ್.ಪಿ ಋಷಿಕೇಶ್ ಸೋನವಾನೆ ಭಗವಾನ್ ಹೇಳಿದ್ದಾರೆ.
