LATEST NEWS
ಮಾರ್ಚ್1 ರಿಂದ ತುರ್ತು ಸೇವೆ ಹೊರತುಪಡಿಸಿ ಇತರೇ ಸರ್ಕಾರಿ ಸೇವೆ ಸ್ಥಗಿತ
ಉಡುಪಿ ಫೆಬ್ರವರಿ 27: ಜಿಲ್ಲೆಯಲ್ಲಿ ಮಾರ್ಚ್ 1 ರಿಂದ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ನಡೆಯಲಿದ್ದು, ಈ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಇತರೆ ಎಲ್ಲಾ ಸರ್ಕಾರಿ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಉಡುಪಿ ಜಿಲ್ಲಾ ಸರಕಾರಿ
ನೌಕರರ ಸಂಘದ ಆಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಹೇಳಿದರು.
ಉಡುಪಿ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ನಡೆದ, ಜಿಲ್ಲೆಯಲ್ಲಿ ಮಾರ್ಚ್ 1 ರಿಂದ ನಡೆಯುವ ನೌಕರರ ಅರ್ನಿದಿಷ್ಟಾವಧಿ ಮುಷ್ಕರದ ರೂಪು ರೇಷೆ ಕುರಿತ , ಜಿಲ್ಲೆಯ ಸರಕಾರಿ ನೌಕರರ ವಿವಿಧ ವೃಂದ ಮತ್ತು ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಮಾತನಾಡಿದರು.
ಫೆಬ್ರವರಿ 21 ರಂದು ಜರುಗಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ ತಾಲ್ಲೂಕು ಯೋಜನಾ ಶಾಖೆಗಳ ಚುನಾಯಿತ ಪ್ರತಿನಿಧಿಗಳ ಹಾಗೂ ವೃಂದ ಸಂಘಗಳ ಅಧ್ಯಕ್ಷರು-ಪದಾಧಿಕಾರಿಗಳ “ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ” ಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಪಡಿಸಿ ದಿನಾಂಕ. 1-3-2023 ರಿಂದ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ‘ಅನಿರ್ಧಿಷ್ಟಾವಧಿ ಮುಷ್ಕರ’ಕ್ಕೆ ಕರೆ ನೀಡಲಾಗಿದೆ ಎಂದರು.
ಮುಷ್ಕರದ ಸಂದರ್ಭದಲ್ಲಿ ಎಲ್ಲಾ ನೌಕರರು ಕಚೇರಿಗೆ ಗೈರು ಹಾಜರಾಗಬೇಕು, ಸರ್ಕಾರದ ಯಾವುದೇ ಒತ್ತಡ, ಬೆದರಿಕೆಗಳಿಗೆ ಮಣಿಯದೇ , ಅತ್ಯಂತ ದಿಟ್ಟವಾಗಿ , ಬೇಡಿಕೆಗಳು ಸಂಪೂರ್ಣ ಈಡೇರುವವರೆಗೂ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದರು.
ರಾಜ್ಯದ 2023-24 ನೇ ಸಾಲಿನ ಆಯ-ವ್ಯಯದಲ್ಲಿ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಸಹಜವಾಗಿಯೇ ನೌಕರರಲ್ಲಿ ನಿರಾಶೆ ಮೂಡಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಶೇ.25 ಕ್ಕೂ ಅಧಿಕ ವ್ಯತ್ಯಾಸವಿದ್ದು ದೇಶದ ಇತರೇ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಅತ್ಯಂತ ಕಡಿಮೆ ಇವೆ ಎಂದರು.
ನೌಕರರ ಪ್ರಮುಖ ಬೇಡಿಕೆಯಾದ, ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆಜಾರಿಗೆ ಮೊದಲು ಶೇ.40% ಫಿಟ್‌ಮೆಂಟ್ ಸೌಲಭ್ಯವನ್ನು ದಿನಾಂಕ: 01-07-2022ರಿಂದ ಜಾರಿಗೆ ಬರುವಂತೆ ಸರ್ಕಾರಿಆದೇಶ ಹೊರಡಿಸುವುದು. ಮತ್ತು ರಾಜ್ಯದಲ್ಲಿ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತಂತೆ ಸರಕಾರದಿಂದ ಸ್ಪಷ್ಟ ಆದೇಶ ದೊರೆಯುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದರು.