Connect with us

    LATEST NEWS

    ಹೆಚ್ಚುತ್ತಿರುವ ಅಶ್ಲೀಲ ಚಿತ್ರಗಳ ವೀಕ್ಷಣೆ : ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಗೆ ಸರ್ಕಾರ ಚಿಂತನೆ

    ಹೆಚ್ಚುತ್ತಿರುವ ಅಶ್ಲೀಲ ಚಿತ್ರಗಳ ವೀಕ್ಷಣೆ : ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಗೆ ಸರ್ಕಾರ ಚಿಂತನೆ 

    ಬೆಂಗಳೂರು, ಸೆಪ್ಟೆಂಬರ್ 23 : ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕಾದ ಮಕ್ಕಳು, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಅತಿಯಾಗಿ ಒಗ್ಗಿಕೊಂಡಿರುವುದು ಮತ್ತು ಕಲಿಕೆಯಿಂದ ದೂರವಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

    ರಾಜ್ಯಾದಂತ್ಯ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಹಲವು ಹೊಸ ನಿಯಮಗಳನ್ನು ರಚಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶಿಸಿದೆ.ಇತ್ತಿಚೆಗಷ್ಟೇ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜಿನೀಶ್ ಅವರು ಸಿಐಡಿ ಇಲಾಖೆಗೆ ಬರೆದಿರುವ ಪತ್ರವೊಂದು ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗುವ ಮಕ್ಕಳು ಶಾಲೆಯಲ್ಲಿ ಕುಳಿತು ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ವಿಷಯದ ಬಗ್ಗೆ ಶಾಲಿನಿ ರಜಿನೀಶ್ ಅವರು ಆತಂಕ ವ್ಯಕ್ತಪಡಿಸಿದ್ದರು. ಈ ಘಟನೆ ವರದಿಯಾದ ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೇರಿದಂತೆ ಶಾಲೆಯಿಂದ ಮನೆಗೆ ತೆರಳಿದ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಲಕಳೆಯುವುದನ್ನು ತಪ್ಪಿಸಲು ಹಾಗೂ ಈ ಬಗ್ಗೆ ಪಾಲಕ, ಪೋಷಕರಲ್ಲಿ ಅರಿವು ಮೂಡಿಸಲು ಹೊಸ ನಿಯಮ ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

    ಅಶ್ಲೀಲತೆಯನ್ನು ಹೆಚ್ಚು ವಿಕ್ಷಣೆ ಮಾಡುತ್ತಿರುವ ಮಕ್ಕಳು:

    ಇಷ್ಟು ದಿನ ಮಕ್ಕಳು ಮೊಬೈಲ್​ನಲ್ಲಿ ಆಟ ಆಡ್ಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ತಿಳಿದಿದ್ದ ಪೋಷಕರಿಗೆ ಮೊನ್ನೆ ಹೊರಬಿದ್ದಿದ್ದ ಸುದ್ದಿ ಬೆಚ್ಚಿಬೀಳಿಸಿತ್ತು. ಮೊಬೈಲ್​ನಿಂದ ಮಕ್ಕಳಲ್ಲಿರುವ ಮುಗ್ಧ ಭಾವನೆಗಳು ಕೂಡ ಕಡಿಮೆಯಾಗ್ತಿವೆ.

    ಮೊಬೈಲ್‌ಗೆ ಅಡಿಕ್ಟ್ ಆಗಿರೋದ್ರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಇದಲ್ಲದೇ ವಿದ್ಯಾರ್ಥಿಗಳು ಮೊಬೈಲ್ ಬಳಸಿ ಶಾಲಾ ಟಾಯ್ಲೆಟ್‌ಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.ಶಾಲೆಯಲ್ಲಿ ಈ ಕಥೆಯಾದರೆ, ಇನ್ನು ಶಾಲೆಯಿಂದ ಮನೆಗೆ ಹೋದ ಬಹುತೇಕ ವಿದ್ಯಾರ್ಥಿಗಳು ಮೊದಲು ಮುಟ್ಟುವುದೇ ಪಾಲಕರ ಮೊಬೈಲ್‌. ಇದನ್ನು ತುರ್ತು ತಪ್ಪಿಸಬೇಕಿದೆ. ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಹೊಂದಿಕೊಂಡಷ್ಟು ಅವರಲ್ಲಿ ಬೇರೆ ರೀತಿಯ ಬದಲಾವಣೆಗಳು ಆಗುತ್ತಿರುತ್ತದೆ. ಶಾಲೆಗಳಲ್ಲಿ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ವಿಚಾರವಾಗಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಲೇ ಬೇಕು ಎಂದು ಆನೇಕ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ ಇಲಾಖೆ ರಾಜ್ಯದ ವಿವಿಧ ಶಾಲೆಗಳಲ್ಲಿ ಇರುವ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದೆ. ಮಕ್ಕಳು ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣದ ದುರ್ಬಳಕೆ ತಪ್ಪಿಸಲು ಹೊಸ ನಿಯಮ ಒಂದನ್ನು ಅಗತ್ಯವಾಗಿ ರೂಪಿಸಬೇಕಿದೆ. ಪಾಲಕ, ಪೋಷಕರು, ಶಾಲಾಡಳಿತ ಮಂಡಳಿ ಹಾಗೂ ಸಾರ್ವಜನಿಕರು ಸೇರಿದಂತೆ ಇಡೀ ಸಮಾಜವೇ ವಿದ್ಯಾರ್ಥಿಗಳ ರಕ್ಷಣೆ ಮತ್ತು ಸುರಕ್ಷತೆಯಲ್ಲಿ ಭಾಗಿಯಾಗುವಂತ ನಿಯಮ ರೂಪಿಸುವ ಅಗತ್ಯವಿದೆ ಎಂಬುದನ್ನು ಉಲ್ಲೇಖೀಸಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು, ಅವರಿಂದ ಮಾಹಿತಿ ಕೋರಿದ್ದರು.

    ಶಾಲಾ ಮಕ್ಕಳನ್ನು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದಿಂದ ದೂರವಿಡುವಲ್ಲಿ ಪಾಲಕ, ಪೋಷಕರ ಕರ್ತವ್ಯ ಅತಿ ಮುಖ್ಯವಾಗಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ(ಸೈಬರ್‌ ವಿಭಾಗ), ಆರೋಗ್ಯ ಇಲಾಖೆ ಮತ್ತು ನಿಮ್ಹಾನ್ಸ್‌ನ ತಜ್ಞ ವೈದ್ಯರು ಮತ್ತು ಶಿಕ್ಷಣ ತಜ್ಞರ ಸಲಹೆ ಪಡೆಯುಲು ನಿರ್ಧರಿಸಿದೆ. ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ(ಕ್ಯಾಮ್ಸ್) ಕೂಡ ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡಿದೆ.ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ. ಶಾಲಾ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣ ಬಳಸುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಪಾಲಕರಿಗೆ ಅರಿವಿಲ್ಲದೇ, ತಮ್ಮ ಮಕ್ಕಳಿಗೆ ಮೊಬೈಲ್‌ ನೀಡುತ್ತಾರೆ. ಇದು ಮಕ್ಕಳು ಸುಲಭವಾಗಿ ಸಾಮಾಜಿಕ ಜಾಲತಾಣ ಪ್ರವೇಶಿಸಲು ದಾರಿಯಾಗಿದೆ.ಫೇಸ್‌ಬುಕ್‌, ವಾಟ್ಸ್‌ಆಪ್‌ ಮೊದಲಾದ ಜಾಲತಾಣಗಳಿಂದ ಮಾನಸಿಕ ಖನ್ನತೆಗೆ ಒಳಗಾಗುತ್ತಿದ್ದಾರೆ ಎಂಬ ಅಘಾತಕಾರಿ ಅಂಶ ಕೂಡ ಬಯಲಾಗಿದ್ದು, ದೇಶದ ಮುಂದಿನ ಭವಿಷ್ಯವಾಗಿರುವ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗ ಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ,

    Share Information
    Advertisement
    Click to comment

    Leave a Reply

    Your email address will not be published. Required fields are marked *