Connect with us

LATEST NEWS

ಸಿಎಎ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ಪೊಲೀಸ್ ಮೇಲೆ ಹಲ್ಲೆ – ಮಾಯಾ ಗ್ಯಾಂಗ್ ನ ಸದಸ್ಯರ ಆರೆಸ್ಟ್

ಮಂಗಳೂರು, ಜನವರಿ 19: ಇತ್ತಿಚೆಗೆ ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಆಘಾತಕಾರಿ ಮಾಹಿತಿ ದೊರೆತಿದ್ದು, 2019ರ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ದುಷ್ಕರ್ಮಿಗಳ ತಂಡ ಪೊಲೀಸರನ್ನು ಟಾರ್ಗೆಟ್ ಮಾಡಿತ್ತು ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದ್ರೋಳಿ ನಿವಾಸಿಗಳಾದ ಅನೀಶ್ ಅಶ್ರಫ್ (22), ಅಬ್ದುಲ್ ಖಾದರ್ (23), ಬಜಪೆ ನಿವಾಸಿ ಶೇಕ್ ಮಹಮ್ಮದ್ ಹ್ಯಾರಿಸ್ ಯಾನೆ ಜಿಗ್ರಿ (31), ತಣ್ಣೀರುಬಾವಿ ನಿವಾಸಿ ಮಹಮ್ಮದ್ ಖಾಯಿಸ್ (24), ಕುದ್ರೋಳಿ ನಿವಾಸಿ ರಾಹಿಲ್ ಯಾನೆ ಚೋಟು (18), ಬಿ.ಸಿ.ರೋಡು ನಿವಾಸಿ ಮಹಮ್ಮದ್ ನವಾಜ್ (30) ಬಂಧಿತ ಆರೋಪಿಗಳು. ಇವರು ಮಾಯ ಗ್ಯಾಂಗ್, ಮಾಯಾ ಟ್ರೂಪ್ ಹೆಸರಲ್ಲಿ ಗುರುತಿಸಿಕೊಂಡಿದ್ದರು.


ಈ ಕುರಿತಂತೆ ಮಾಹಿತಿ ನೀಡಿದ ಮಂಗಳೂರಿನ ಪೊಲೀಸ್ ಆಯುಕ್ತ ಶಶಿಕುಮಾರ್  ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಸೇರಿ ಈ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು, ಇದೀಗ ಮತ್ತೆ 6 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ನಗರದಲ್ಲಿ ಕರ್ತವ್ಯನಿರತ ಬಂದರು ಠಾಣೆಯ ಹೆಡ್ ಕಾನ್‌ಸ್ಟೆಬಲ್ ಗಣೇಶ್ ಕಾಮತ್ ಎಂಬವರ ಮೇಲೆ ಡಿ.16ರಂದು ಮಾರಕಾಯುಧದಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಮಾಹಿತಿ ನೀಡಿದರು.


ಗೋಲಿಬಾರ್ ಪ್ರಕರಣದ ಘಟನೆಗೆ ಪ್ರತೀಕಾರವಾಗಿ ಮಾಯಾ ಗ್ಯಾಂಗ್ ಪೊಲೀಸರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದು, ಇದಕ್ಕಾಗಿ ಗೋಲಿಬಾರ್ ದಿನವೇ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು. ಆದರೆ ಆ ದಿನ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವ ಕಾರಣ ಡಿಸೆಂಬರ್ 16ರಂದೇ ಹಲ್ಲೆ ನಡೆಸುವ ಯೋಜನೆ ರೂಪಿಸಿದ್ದರು. ಹಲ್ಲೆ ನಡೆಸುವಾಗಲೂ ದುಷ್ಕರ್ಮಿಗಳು ಭಾರೀ ಮುಂದಾಲೋಚನೆ ಮಾಡಿ ಅಪ್ರಾಪ್ತ ಬಾಲಕನ ಮುಖಾಂತರ ಹಲ್ಲೆ ನಡೆಸಿದ್ದರು. ಅಪ್ರಾಪ್ತರನ್ನು ಈ ಕೃತ್ಯಕ್ಕೆ ಬಳಸಿದರೆ ಬಂಧಿಸಿದರೂ ಶೀಘ್ರವೇ ಜಾಮೀನು ಮೇಲೆ ಬಿಡುಗಡೆಯಾಗಬಹುದೆಂಬ ಯೋಜನೆ ರೂಪಿಸಿದ್ದರು. ಇದು ಮಾತ್ರವಲ್ಲದೆ ಹಲ್ಲೆ ಆರೋಪಿ ಕೃತ್ಯ ವೇಳೆ ಅಮಲು ಮಾತ್ರೆ ಸೇವಿಸಿದ್ದ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನವಾಜ್ (30) ಎಂಬಾತನನ್ನು ಬಂಧಿಸಿ, ಸಮಗ್ರವಾಗಿ ವಿಚಾರಣೆ ನಡೆಸಿ ಪ್ರಕರಣದ ಸತ್ಯಾಂಶ ಹಾಗೂ ಇದರ ಹಿಂದಿರುವ ಜಾಲವನ್ನು ಬಯಲಿಗೆಳೆಯಲಾಗಿದೆ. ಕೋಳಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಮಹಮ್ಮದ್ ನವಾಜ್ ಮತ್ತು ಅಪ್ರಾಪ್ತ ಬಾಲಕ ಸೇರಿ ಈ ಹಲ್ಲೆ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ವಿವರಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *