LATEST NEWS
ಡಿಎಸ್‌ಪಿಯಾಗಿ ಚಿನ್ನದ ಓಟಗಾರ್ತಿ ‘ಹಿಮದಾಸ್’ ಅಧಿಕಾರ ಸ್ವೀಕಾರ
ಗುವಾಹಟಿ, ಫೆಬ್ರವರಿ 26: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಆಗಿ ಸೇರ್ಪಡೆಗೊಂಡರು.
ಸೋನೊವಾಲ್ ಅವರು ಹಿಮಾ ದಾಸ್‌ಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಕ್ರೀಡಾಸಚಿವರು, ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕರು ಸಹಿತ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿಎಸ್‌ಪಿ ಆಗಿ ಅಧಿಕಾರವಹಿಸಿಕೊಂಡ ಬಳಿಕ ಮಾತನಾಡಿದ 21ರ ಹರೆಯದ ಹಿಮಾ, “ನಾನು ಬಾಲ್ಯದಲ್ಲಿದ್ದಾಗಲೇ ಒಂದು ದಿನ ಪೊಲೀಸ್ ಆಗಬೇಕೆಂಬ ಕನಸು ಕಂಡಿದ್ದೆ. ತಾಯಿಯ ಆಶಯವೂ ಇದೇ ಆಗಿತ್ತು. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದ ಜೊತೆಗೆ ಕ್ರೀಡಾಕ್ಷೇತ್ರದಲ್ಲೂ ಉತ್ತಮ ಪ್ರದರ್ಶನವನ್ನು ಮುಂದುವರಿಸುವೆ” ಎಂದಿದ್ದಾರೆ.
ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಹಾಗೂ ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ ಹಿಮಾ ‘ದಿಂಗ್ ಎಕ್ಸ್‌ಪ್ರೆಸ್’ ಎಂದೇ ಖ್ಯಾತಿ ಪಡೆದಿದ್ದರು. ಫೆಬ್ರವರಿ 11ರಂದು ಪೊಲೀಸ್ ಅಧಿಕಾರಿ ಹುದ್ದೆಗೆ ನೇಮಕವಾಗಿದ್ದರು. 2018ರ ವಿಶ್ವ ಜೂನಿಯರ್ ಚಾಂಪಿಯನ್ ಎನ್‌ಐಎಸ್-ಪಾಟಿಯಾಲದಲ್ಲಿ ತರಬೇತಿ ಪಡೆದಿದ್ದರು. ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ಗುರಿ ಹಾಕಿಕೊಂಡಿದ್ದಾರೆ.