Connect with us

BELTHANGADI

ಬೆಳ್ತಂಗಡಿ – ಕೋರ್ಟ್ ಮೆಟ್ಟಿಲೇರಿದ ದೈವ ನರ್ತನ ಸೇವೆ ವಿಚಾರ….ಏನಿದು ವಿವಾದ….?

ಬೆಳ್ತಂಗಡಿ, ಡಿಸೆಂಬರ್​ 20: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೀಗ ದೈವ ನರ್ತನ ಸೇವೆ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ಅನ್ಯ ಸಮಾಜದ ಯುವಕ ಗುಳಿಗ ದೈವಕ್ಕೆ ನರ್ತನ ಸೇವೆ ಮಾಡಿದ್ದಕ್ಕೆ, ತಲಾತಲಾಂತರದಿಂದ ದೈವ ನರ್ತನ ಮಾಡಿಕೊಂಡು ಬರುತ್ತಿರುವ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನಲೆ ಇದೀಗ ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ . ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂಡಾಯಿಪಳಿಕೆ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ಈ ನಿಯಮವನ್ನು ಮೀರಿ ದೈವ ಕಟ್ಟಿದ ವಿಚಾರ ಇದೀಗ ಭಾರೀ ವಿವಾದಕ್ಕೆ ಎಡೆ ಮಾಡಿದೆ.


ಕಳೆದ ಆರು ವರ್ಷಗಳಿಂದ ಮೂಡಾಯಿಪಳಿಕೆಯ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ಗುಳಿಗ ದೈವದ ಕೋಲ ನಡೆದುಕೊಂಡು ಬರುತ್ತಿದೆ. ನೆತ್ತರು ಗುಳಿಗ ಎನ್ನುವ ದೈವದ ನರ್ತನವನ್ನು ಇಲ್ಲಿ ಮೊಗೇರ ಸಮುದಾಯದ ಯುವಕನೊಬ್ಬ ನಿರ್ವಹಿಸುತ್ತಿರುವುದು ಈ ವಿವಾದಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ತಲತಲಾಂತರಗಳಿಂದ ಉಡುಪಿ,ದಕ್ಷಿಣಕನ್ನಡ, ಕಾಸರಗೋಡು ಹಾಗು ಕೇರಳದ ಇತರ ಭಾಗದಲ್ಲಿ‌ ಆರಾಧಿಸಲ್ಪಡುವ ದೈವಾರಾಧನೆಯಲ್ಲಿ‌ ನಲಿಕೆ, ಪರವ, ಪಂಬದ, ಮಲಯ ಹೀಗೆ ನಿರ್ದಿಷ್ಟ ಸಮುದಾಯದವರು ದೈವಗಳ ನರ್ತನ ಸೇವೆ ನಡೆಸುತ್ತಾರೆ. ಬೇರೆ ಯಾವ ಜಾತಿಯವರೂ ಈ ಸೇವೆಯನ್ನು ಮಾಡಬಾರದು ಎನ್ನುವ ಅಲಿಖಿತ ನಿಯಮಗಳೂ ಇಲ್ಲಿವೆ.


ಆದರೆ ಮೂಡಾಗಿಪಲ್ಕೆಯ ಚಿತ್ತರಂಜನ್ ಎನ್ನುವ ಯುವಕ ಮೊಗೇರ ಸಮುದಾಯಕ್ಕೆ ಸೇರಿದ್ದರೂ, ಗುಳಿಗ ದೈವಕ್ಕೆ ವೇಷಭೂಷಣಗಳನ್ನು ಹಾಕಿ ನರ್ತಿಸುತ್ತಿದ್ದಾನೆ. ಚಿತ್ತರಂಜನ್ 9 ವರ್ಷದ ಬಾಲಕನಾಗಿರುವ ಸಂದರ್ಭದಲ್ಲಿ ಆತನ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಆತನ ವರ್ತನೆಯಲ್ಲಿ ಬದಲಾವಣೆಯಾಗಿ, ದೈವದ ಆಹ್ವಾಹನೆಯಾಗುತ್ತಿತ್ತು. ಚಿತ್ತರಂಜನ್ ಇದ್ದ ಮನೆಯಲ್ಲಿ ಉದ್ಬವ ಲಿಂಗದ ಜೊತೆಗೆ ಹಲವು ದೈವಗಳು ನೆಲೆಯೂರಿದ್ದ ಕಾರಣ, ಆ ದೈವಗಳಿಗೆ ಆರಾಧನೆ ನಡೆಯಬೇಕು ಎನ್ನುವ ಸಂದೇಶವನ್ನೂ ದೈವಗಳು ಚಿತ್ತರಂಜನ್ ಮೂಲಕ ನೀಡುತ್ತಿತ್ತಂತೆ. ಈ ಕಾರಣಕ್ಕೆ ಮೂಡಾಯಿಪಲ್ಕೆಯಲ್ಲಿ ದೈವಗಳ ಗುಡಿ ನಿರ್ಮಿಸಿ ಆರಾಧನೆಯನ್ನು ಆರಂಭಿಸಲಾಗಿತ್ತು. ಇವುಗಳಲ್ಲಿ ನೆತ್ತರು ಗುಳಿಗ ದೈವ ಮತ್ತು ಈಶ್ವರ ಗುಳಿಗ ದೈವಗಳಿಗೆ ಮಾತ್ರ ಕೋಲವನ್ನು ನೀಡಲಾಗುತ್ತಿದೆ. ಈ ದೈವಗಳ ನಿರ್ತನವನ್ನು ಸ್ವತಹ ಚಿತ್ತರಂಜನ್ ಮಾಡುತ್ತಿದ್ದು, ಕಳೆದ ಆರು ವರ್ಷಗಳಿಂದ ಪ್ರತೀ ತಿಂಗಳ ಸಂಕ್ರಾತಿಯಂದು ಈತ ದೈವಗಳ ನರ್ತನ ಸೇವೆ ನಡೆಸಿಕೊಂಡು ಬರುತ್ತಿದ್ದಾನೆ. ಆದರೆ ಕಳೆದ ಜನವರಿ ತಿಂಗಳಿನಲ್ಲಿ ಚಿತ್ತರಂಜನ್ ದೈವಗಳ ವೇಷಭೂಷಣ ಧರಿಸಿ ನರ್ತನ ಮಾಡುವ ಸಂದರ್ಭದಲ್ಲಿ ದೈವ ನರ್ತಕರೆಂದೇ ಗುರುತಿಸಿಕೊಂಡಿರುವ ನಲಿಕೆ ಸಮುದಾಯದ ಜನ ದೈವದ ನರ್ತನ ಸೇವೆಗೆ ತಡೆಯೊಡ್ಡಿದ್ದರು. ಈ ಬಾರಿ ಮತ್ತೆ ಡಿಸೆಂಬರ್ 28 ರಿಂದ 30 ರ ತನಕ ಚಿತ್ತರಂಜನ್ ಗುಳಿಗ ದೈವದ ನರ್ತನ ಸೇವೆ ನಡೆಸಲಿದ್ದು, ಈ ಬಾರಿಯೂ ನಲಿಕೆ ಸಮುದಾಯ ತಡೆಯೊಡ್ಡುವ ಆತಂಕದ ಹಿನ್ನಲೆಯಲ್ಲಿ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.


9 ತರಗತಿ ತನಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಇದೀಗ ದೈವದ ಕೆಲಸದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.‌ಚಿತ್ತರಂಜನ್ ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದು, ಚಿತ್ತರಂಜನ್ ನನ್ನು ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ದೈವಗಳ ನರ್ತನೆ ಮಾಡುವ ಅನಿವಾರ್ಯತೆ ಇರಲಿಲ್ಲ. ಹಾಗೆಂದು ದೈವಗಳ ಇಚ್ಛೆಯಾಗಿರುವಾಗ ಬೇರೆ ದಾರಿಯಿಲ್ಲದೆ ಮಗನನ್ನು ದೈವಗಳ ಕೆಲಸಕ್ಕೆ ಕಳುಹಿಸಿಕೊಡಲಾಗಿದೆ. ಈ ನಡುವೆ ನಲಿಕೆ ಸಮುದಾಯದ ವ್ಯಕ್ತಿಗಳು ಬಂದು ತಡೆಯುವ ಕೆಲಸ ನಡೆದಿದೆ‌.ಈ ಹಿನ್ನಲೆಯಲ್ಲಿ ಈ ಬಾರಿ‌ ಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಲಾಗಪಡಿಸುವಂತೆ ವಿಚಾರದಲ್ಲಿ ದೈವಗಳ ಮೊರೆ ಗೋಗುವ ಬದಲು ನ್ಯಾಯಾಲಯ ಮೊರೆ ಹೋಗಲಾಗಿದೆ. ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಮನವಿ ಮಾಡಲಾಗಿದೆ.

ದೈವಾರಾಧನೆಯ ವಿಚಾರದಲ್ಲಿ ಯಾವುದೇ ಕಟ್ಟುಪಾಡುಗಳಲ್ಲಿ ಬದಲಾವಣೆಯಾಗಬೇಕಾದಲ್ಲಿ ದೈವಗಳದ್ದೇ ಮೊರೆ ಹೋಗೋದು ಸಾಮಾನ್ಯ. ಆದರೆ ಈ ಬಾರಿ ದೈವಗಳ ಬದಲು ನ್ಯಾಯಾಲಯದ‌ ಮೊರೆ ಹೋಗಿರೋದು ಇದೇ ಮೊದಲ ಬಾರಿಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *