KARNATAKA
ಗಂಡನ ಮೇಲಿನ ಕೋಪಕ್ಕೆ 4 ವರ್ಷದ ಮಗುವನ್ನ ಕೊಂದ ಕೀಚಕಿ -ಶವ ಪರೀಕ್ಷೆ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟ ವೈದ್ಯರು..!
ಗೋವಾ ಜನವರಿ 10: ಗೋವಾಗೆ ಬೆಂಗಳೂರಿನಿಂದ ಪ್ರವಾಸಕ್ಕೆಂದು ತೆರಳಿದ್ದ ಮಹಿಳೆಯೊಬ್ಳು ರಾಕ್ಷಸಿಯಾಗಿ ಬದಲಾಗಿದ್ದು, ಗಂಡನ ಮೇಲಿನ ಕೋಪಕ್ಕೆ 4 ವರ್ಷದ ಮಗುವನ್ನೇ ಕೊಂದಿದ್ದ ಕೀಚಕಿ ಸೂಟ್‌ಕೇಸ್‌ನಲ್ಲಿ ಮಗುವನ್ನ ಹಾಕಿ ಕಾರಿನಲ್ಲಿ ಸಾಗಿಸಲು ಹೋಗಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾಳೆ. ರಾಕ್ಷಸಿ ತಾಯಿಯ ಹೆಸರು ಸುಚನಾ ಸೇಠ್. ಸಿಲಿಕಾನ್ ಸಿಟಿಯ ಸ್ಟಾರ್ಟ್ಅಪ್ ಕಂಪನಿ ಒಂದರ ಸಿಇಒ ಆಗಿದ್ದ ಈ ಸುಚನಾ ತನ್ನ ಗಂಡು ಮಗುವನ್ನೇ ಕೊಂದು ಮನುಕುಲವೇ ತಲೆತಗ್ಗಿಸುವಂತ ಕೆಲಸಮಾಡಿದ್ದಳು. ಜನವರಿ 4ರಂದು ಗೋವಾಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಈ ಸುಚನಾ ತನ್ನ 4 ವರ್ಷದ ಮಗು ಚಿನ್ಮಯ್ ಸೇಠ್ ಜೊತೆ ಕರೆದುಕೊಂಡು ಹೋಗಿದ್ದಳು. ಹೀಗೆ ಬೆಂಗಳೂರಿನಿಂದ ಗೋವಾಕ್ಕೆ ಹೋದ ಈಕೆ ಗಂಡನ ಮೇಲಿನ ಕೋಪಕ್ಕೆ ಪುಟ್ಟ ಕಂದನನ್ನೇ ಕೊಂದು ಹಾಕಿ ಬಿಟ್ಟಿದ್ದಳು.
ಪಶ್ಚಿಮ ಬಂಗಾಳ ಮೂಲದ ಈ ಸುಚನಾ ಸೇಠ್, ಬೆಂಗಳೂರಿನಲ್ಲಿ ತಮಿಳುನಾಡಿನ ಟೆಕ್ಕಿ ವೆಂಕಟರಮಣ ಜೊತೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಎತ್ತು ಏರಿಗೆ ಕೋಣ ನೀರಿಗೆ ಅನ್ನೋ ಹಾಗೆ ಇವರಿಬ್ಬರ ಬಾಳ ಬಂಡಿ ದಾರಿ ತಪ್ಪಿತ್ತು. ಕಳೆದ 2 ವರ್ಷಗಳ ಹಿಂದೆ ಸುಚನಾ ಮತ್ತು ವೆಂಕಟರಮಣ ನಾನೊಂದು ತೀರ ನೀನೊಂದು ತೀರ ಎಂದು ದೂರವಾಗಿದ್ದರು. ಇವರಿಬ್ಬರ ಡಿವೋರ್ಸ್ ಪ್ರಕರಣ ಸಹ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿತ್ತು. ಪ್ರತಿ ಭಾನುವಾರ ಮಗುವನ್ನ ನೋಡಲು ತಂದೆ ವೆಂಕಟರಮಣಗೆ ಕೋರ್ಟ್ ಅನುಮತಿ ನೀಡಿತ್ತು. ಅದೇನಾಯ್ತೋ ಗೊತ್ತಿಲ್ಲ ಗಂಡನ ಮೇಲಿನ ಕೋಪ ಸುಚನಾಳ ರಾಕ್ಷಸ ರೂಪವನ್ನ ಪ್ರದರ್ಶಿಸಿದೆ, ಹೆತ್ತ ಕಂದನನ್ನೇ ಉಸಿರುಗಟ್ಟಿಸಿ ಕೊಲ್ಲುವಷ್ಟು ಕ್ರೂರಿಯಾಗಿಸಿದೆ. ಇನ್ನು 4 ವರ್ಷದ ಪುತ್ರನನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಬಿದ್ದ ಸಿಇಓ ಸುಚನಾ ಸೇಠ್ ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ಗೋವಾ ಪೊಲೀಸರ ವಿಚಾರಣೆಯ ವೇಳೆ ಮಗುವನ್ನು ತಾನೇ ಕೊಂದಿರುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೆ ಕಾರಣವನ್ನು ಕೂಡ ಸುಚನಾ ವಿವರಿಸಿದ್ದಾಳೆ. ವಿಚ್ಛೇದನ ಕೋರ್ಟ್ ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನ ವಿಡೀಯೋ ಕಾಲ್ ಮೂಲಕ ತೋರಿಸಬೇಕಿತ್ತು. ಆದರೆ ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು ಎಂದಿದ್ದಾಳೆ.
ಇದೇ ನೋವಿನಲ್ಲಿ ಕೈ ಕುಯ್ದ ಆತ್ಮಹತ್ಯೆಗೆ ಯತ್ನಿಸಿದೆ, ಆದರೆ ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನು ಮಾಡಬೇಕೆಂದು ತೋಚದೆ ಸೂಟ್ ಕೇಸ್ ನಲ್ಲಿ ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದು ವಿವರಿಸಿದ್ದಾಳೆ. ಬೆಂಗಳೂರು ಕಂಪನಿಯ CEO ಆಗಿರುವ ಸುಚನಾ ಸೇಠ್ ಗೋವಾದಲ್ಲಿ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗ ಇದ್ದಳು. ಜನವರಿ 8 ರಂದು ಅಪಾರ್ಟ್ ಮೆಂಟ್ ಸಿಬ್ಬಂದಿ ಜೊತೆ ನಾನು ಬೆಂಗಳೂರು ಹೋಗಬೇಕು ಟ್ಯಾಕ್ಸ್ ಬುಕ್ ಮಾಡುವಂತೆ ಹೇಳಿದ್ದಾಳೆ. ಆಗ ಅವರು ಟ್ಯಾಕ್ಸ್ ಬದಲು ವಿಮಾನದಲ್ಲಿ ಪ್ರಯಾಣಿಸುವಂತೆ ಸೂಚಿಸುತ್ತಾರೆ. ಇದಕ್ಕೊಪ್ಪದ ಸೇಠ್ ನಾನು ಟ್ಯಾಕ್ಸಿಯಲ್ಲೇ ಹೋಗಬೇಕು ಎಂದು ಹಠಕ್ಕೆ ಬಿದ್ದಿದ್ದಾಳೆ. ಅಂತೆಯೇ ಸಿಬ್ಬಂದಿ ಟ್ಯಾಕ್ಸಿ ಬುಕ್ ಮಾಡುತ್ತಾರೆ.
ಸೇಠ್ ಅಪಾರ್ಟ್‌ಮೆಂಟ್‌ನಿಂದ ಹೊರಬಂದಾಗ ಆಕೆಯ ಪುತ್ರ ಕಾಣಲಿಲ್ಲ. ಕೈಯಲ್ಲಿ ಭಾರವಾದ ಸೂಟ್‌ಕೇಸ್ ಹಿಡಿದುಕೊಂಡು ಹೋಗಿರುವುದಾಗಿ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಅಪಾರ್ಟ್ ಮೆಂಟ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೊಲೀಸರು, ಆಕೆಗೆ ಕರೆ ಮಾಡಿ ಕರೆದು ರಕ್ತದ ಕಲೆಗಳು ಮತ್ತು ಕಾಣೆಯಾದ ಮಗನ ಬಗ್ಗೆ ಕೇಳಿದರು. ಈ ವೇಳೆ ಆಕೆ, ಪೀರಿಯೆಡ್ಸ್ ಆಗಿದ್ದು, ಅದರ ಕಲೆಗಳು ಉಂಟಾಗಿವೆ ಎಂದು ಸುಳ್ಳು ಹೇಳುವ ಮೂಲಕ ಬಚಾವ್ ಆಗಲು ಯತ್ನಿಸಿದ್ದಾಳೆ.
ಇನ್ನು ಮಗನ ಬಗ್ಗೆ ಕೇಳಿದ್ದಕ್ಕೆ ಆತ ದಕ್ಷಿಣ ಗೋವಾದ ಮಾರ್ಗೋ ಪಟ್ಟಣದಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳುತ್ತಾ ಅಲ್ಲಿನ ವಿಳಾಸವನ್ನು ನೀಡಿದ್ದಾಳೆ. ಪೊಲೀಸರು ತಕ್ಷಣವೇ ಫಟೋರ್ಡಾ ಪೊಲೀಸರ ಸಹಾಯವನ್ನು ಪಡೆದರು ಮತ್ತು ಆಕೆ ನೀಡಿದ ವಿಳಾಸ ನಕಲಿ ಎಂಬುದನ್ನು ತಿಳಿದುಕೊಂಡರು. ಇತ್ತ ಸೇಠ್ ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಡ್ರೈವರ್‌ಗೆ ಇನ್ಸ್‌ಪೆಕ್ಟರ್ ಕರೆಮಾಡಿ ಬೆಂಗಳೂರಿಗೆ ಹೋಗಬೇಡ, ಬದಲಾಗಿ ಹತ್ತಿರದ ಪೊಲೀಸ್ ಠಾಣೆ ಕಡೆ ಹೋಗುವಂತೆ ಸೂಚಿಸಿದ್ದಾರೆ. ಅಂತೆಯೇ ಆತ ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಯತ್ತ ತನ್ನ ವಾಹನವನ್ನು ತಿರುಗಿಸಿದ್ದಾನೆ.
ಚಿತ್ರದುರ್ಗದ ಪೊಲೀಸರು ಮಹಿಳೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿದೆ. ನಂತರ ಕಲಾಂಗಗುಟ್ ಪೊಲೀಸ್ ತಂಡವು ಚಿತ್ರದುರ್ಗಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು ಗೋವಾಕ್ಕೆ ಕರೆತರಲಾಯಿತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಮೃತ ಮಗುವಿನ ಶವಪರೀಕ್ಷೆ ನಡೆಸಿ ಮೃತದೇಹವನ್ನ ತಂದೆ ವೆಂಕಟರಾಮಣಗೆ ಹಸ್ತಾಂತರ ಮಾಡಲಾಯ್ತು. ಬೆಂಗಳೂರಿನ ರಾಜಾಜಿ ನಗರದ ಸ್ಮಶಾನದಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಿ ವೆಂಕಟರಮಣ ಕುಟುಂಬಸ್ಥರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.
ಇನ್ನೂ ಶವಪರೀಕ್ಷೆ ಬಳಿಕ ಮಾತನಾಡಿದ ವೈದ್ಯ ಡಾ.ಕುಮಾರ್ ನಾಯಕ್ ಬಟ್ಟೆಯನ್ನ ಬಳಸಿ ಮಗುವನ್ನು ಕುತ್ತಿಗೆ ಹಿಸುಕಿ ಸಾಯಿಸಲಾಗಿದೆ ಎಂಬ ಸತ್ಯ ಬಿಚ್ಚಿಟ್ಟರು. ಕುತ್ತಿಗೆ ಹಿಸುಕಿ ಸಾಯಿಸಲಾಗಿದೆ. ಬಟ್ಟೆಯನ್ನು ಬಳಸಿ ಕೊಲೆ ಮಾಡಿರಬಹುದು. ಕೃತ್ಯಕ್ಕೆ ರಿಬ್ಬನ್ನು ಬಳಸಿರಲೂಬಹುದು. ಬರಿ ಕೈಯಿಂದ ಸಾಯಿಸಲು ಸಾಧ್ಯವಿಲ್ಲ. ಕೆಲ ವಸ್ತುಗಳನ್ನು ಬಳಸಿದ್ದಾಳೆ. ದೇಹದಲ್ಲಿ ಯಾವುದೇ ಗಾಯಗಳಿಲ್ಲ. ಕೊಲೆ ಮಾಡಿ 36 ಗಂಟೆಗಿಂತಲೂ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಒಟ್ನಲ್ಲಿ ಹೆತ್ತ ಕಂದನಿಗೆ ದಾರಿದೀಪವಾಗಬೇಕಿದ್ದ ತಾಯಿಯೇ ಸಾವಿನ ಮನೆಗೆ ಕಂದನನ್ನ ನೂಕಿ ತಾಯ್ತನಕ್ಕೆ ಕಳಂಕತಂದಿದ್ದಾಳೆ.. ಮಡದಿಯಿಂದ ದೂರಾಗಿ ಒಂಟಿಯಾಗಿದ್ದ ಬಾಳಿಗೆ ಬೆಳಕಿನ ಭರವಸೆ ನೀಡಿದ್ದ ಕಂದನ ಅಗಲಿಕೆ ವೆಂಕಟರಮಣ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ.