LATEST NEWS
ಗೋವಾದಲ್ಲಿ ಗಾಂಜಾ ಬೆಳೆಯಲು ಷರತ್ತುಬದ್ದ ಅನುಮತಿ ನೀಡಲು ನಿರ್ಧರಿಸಿದ ಬಿಜೆಪಿ ಸರಕಾರ

ಪಣಜಿ ಡಿಸೆಂಬರ್ 31: ಗೋವಾದಲ್ಲಿ ಗಾಂಜಾ ಬೆಳೆ ಬೆಳೆಯಲು ಬಿಜೆಪಿ ಸರಕಾರ ಷರತ್ತು ಬದ್ದ ಅನುಮತಿ ನೀಡಲು ನಿರ್ಧರಿಸಿದೆ. ಈಗಾಗಲೇ ವಿಶ್ವಸಂಸ್ಥೆಯಲ್ಲಿ ಗಾಂಜಾವನ್ನು ಮಾದಕ ವಸ್ತು ಪಟ್ಟಿಯಿಂದ ಹೊರಗಿಡುವ ನಿರ್ದಾರಕ್ಕೆ ಭಾರತ ತನ್ನ ಮತ ಚಲಾಯಿಸಿದ್ದು, ಈ ಕುರಿತಂತೆ ದೇಶದ ಕಾನೂನು ಬದಲಾವಣೆ ಆಗಬೇಕಿದೆ ಅಷ್ಟೇ.
ಈ ನಡುವೆ ಔಷಧ ಉದ್ದೇಶಕ್ಕಾಗಿ ಗಾಂಜಾ ಬೆಳೆಯಲು ಅನುಮತಿ ನೀಡುವ ಪ್ರಸ್ತಾಪಕ್ಕೆ ಗೋವಾದ ಬಿಜೆಪಿ ಸರ್ಕಾರದ ಕಾನೂನು ಇಲಾಖೆ ಅನುಮೋದನೆ ನೀಡಿದೆ. ಆರೋಗ್ಯ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದ್ದು, ಔಷಧ ಉದ್ದೇಶಗಳಿಗಾಗಿ ಮಾತ್ರ ಗಾಂಜಾದ ನಿಯಂತ್ರಿತ ಕೃಷಿ ನಡೆಸಲು ಅನುಮತಿಸಲಾಗುತ್ತದೆ.

ನೈಸರ್ಗಿಕ ಔಷಧ ಕಂಪನಿಗಳಿಗೆ ಮಾತ್ರ ಇದನ್ನು ಮಾರಾಟ ಮಾಡಲಾಗುತ್ತದೆ ಎಂದು ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಹೇಳಿದ್ದಾರೆ. ಆದರೆ ಸರ್ಕಾರದ ನಡೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮಾದಕವಸ್ತುಗಳ ಬಳಕೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿವೆ. ಬಿಜೆಪಿ ಸರ್ಕಾರ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿದೆ ಎಂದು ಗೋವಾ ಕಾಂಗ್ರೆಸ್ ವಕ್ತಾರ ಅಮರನಾಥ್ ಪಂಜಿಕರ್ ಟೀಕಿಸಿದ್ದಾರೆ.