LATEST NEWS
ನಿಶ್ಚಿತಾರ್ಥದ ನಂತರ ಹುಡುಗ ಕಾಲುಕಳೆದುಕೊಂಡರೂ…..ಅವನನ್ನೇ ವರಿಸಿದ ಹುಡುಗಿ…..
ನಿಶ್ಚಿತಾರ್ಥದ ನಂತರ ಹುಡುಗ ಕಾಲುಕಳೆದುಕೊಂಡರೂ…. ಅವನನ್ನೇ ವರಿಸಿದ ಹುಡುಗಿ
ಬೆಳ್ತಂಗಡಿ ಡಿಸೆಂಬರ್ 16: ಯುವಕನಲ್ಲಿ ಯಾವುದೇ ಊನ ಇದ್ದರೂ, ಈಗಿನ ಹುಡುಗಿಯರು ಮದುವೆಗೆ ನಿರಾಕರಿಸುತ್ತಾರೆ. ಹುಡುಗಿ ಮನೆಯವರೂ ಹುಡುಗ ಬಡವನಾದಲ್ಲಿ ಸಂಬಂಧವೇ ಬೇಡ ಎನ್ನುತ್ತಾರೆ. ಅಂತದ್ರಲ್ಲಿ ಇಲ್ಲೊಬ್ಬಳು ಹುಡುಗಿ ಮನೆಯವರು ಮದುವೆ ಬೇಡ ಎಂದರೂ ಕಾಲು ಕಳಕೊಂಡ ಹುಡುಗನನ್ನು ವರಿಸುವ ಮೂಲಕ ಸುದ್ದಿಯಾಗಿದ್ದಾಳೆ.
ಇದು ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಎಂಬಲ್ಲಿ. ತಾಲೂಕಿನ ಕಳೆಂಜ ಗ್ರಾಮದ ಯುವಕ ಚಂದ್ರಶೇಖರನಿಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸಂಜೀವಿನಿ ಎಂಬ ಹುಡುಗಿ ಜೊತೆ ವರ್ಷದ ಹಿಂದೆ ಮದುವೆ ನಿಶ್ಚಯವಾಗಿತ್ತು. ಆದರೆ ಟ್ಯಾಂಕರ್ ಕ್ಲೀನರ್ ಆಗಿದ್ದ ಚಂದ್ರಶೇಖರ್ ಅಂಕೋಲಾದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಒಂದು ಕಾಲನ್ನೇ ಕಳಕೊಳ್ಳುವಂತಾಗಿತ್ತು. ಇದರಿಂದ ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದರೆ, ಇತ್ತ ತೀರಾ ಬಡತನದಲ್ಲಿದ್ದ ಹುಡುಗ ಮತ್ತು ವೃದ್ಧೆ ತಾಯಿ ನೊಂದುಕೊಂಡಿದ್ದರು.
ಇದೇ ವೇಳೆ ಹುಡುಗಿ ಸಂಜೀವಿನಿ ಅಂಗವಿಕಲ ಹುಡುಗನನ್ನು ವರಿಸಲು ಒಪ್ಪಿದ್ದಲ್ಲದೆ, ಹಿಂದು ಸಂಘಟನೆಗಳ ಸಹಾಯ ಯಾಚಿಸಿದ್ದಾಳೆ. ಹುಡುಗಿಯ ಮಾನವೀಯ ನಡೆಯನ್ನು ಮೆಚ್ಚಿದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ನಾಯಕರು ತಾವೇ ಮುಂದೆ ನಿಂತು ಅದ್ದೂರಿಯಾಗಿ ಮದುವೆ ನೆರವೇರಿಸಿದ್ದಾರೆ.
ಕಾಯರ್ತಡ್ಕದ ಉಮಾಮಹೇಶ್ವರ ದೇವಸ್ಥಾನದಲ್ಲಿ ಮದುವೆ ನಡೆದಿದ್ದು ಸ್ವಾಮೀಜಿಗಳು, ಧಾರ್ಮಿಕ ಮುಖಂಡರನ್ನು ಸೇರಿಸಿ ಸಮಾಜೋತ್ಸವ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದಾರೆ.