LATEST NEWS
ಸಂತ ಜೆರೋಸಾ ಶಾಲೆಯ ಪ್ರಕರಣ – ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ
ಮಂಗಳೂರು ಫೆಬ್ರವರಿ 17: ಮಂಗಳೂರಿನ ಜೆರೋಸಾ ಶಾಲೆಯ ವಿವಾದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ ಎಂದು ಕೇಳಿಬಂದ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಕುರಿತಂತೆ ಈಗಾಗಲೇ ಪ್ರತಿಭಟನೆಗಳು ನಡೆದು ಶಾಸಕರ ಮೇಲೆ ಪ್ರಕರಣ ದಾಖಲಾಗಿದೆ. ಈ ಕುರಿತಂತೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಜೆರೋಸಾ ಶಾಲೆ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ ಆರೋಪ ಸಂಬಂಧ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. IAS ಅಧಿಕಾರಿ ಡಾ.ಎಸ್.ಆಕಾಶ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದರು.
ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಶೀಘ್ರದಲ್ಲೇ ಸತ್ಯಾಂಶ ತಿಳಿಯುತ್ತದೆ. ತುರ್ತಾಗಿ ತನಿಖೆ ಮಾಡಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ನಮ್ಮ ಅಭಿಪ್ರಾಯ, ಅವರ ಅಭಿಪ್ರಾಯ ಏನೇ ಇರಲಿ, ಕಾನೂನು ಮತ್ತು ಸಂವಿಧಾನ ಮುಖ್ಯ. ಶಾಸಕರು ಮತ್ತು ಇತರರ ನಡವಳಿಕೆಯಿಂದ ನಮಗೆ ಬಹಳಷ್ಟು ನೋವಾಗಿದೆ. ಧಾರ್ಮಿಕವಾಗಿ ಸಮಾಜವನ್ನು ಇಬ್ಬಾಗ ಮಾಡಲು ಹೋಗಿದ್ದಾರೆ ಎಂದರು.