LATEST NEWS
ಹೆಲಿಕಾಪ್ಟರ್ ಪತನದಲ್ಲಿ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ವಿಧಿವಶ
ಚೆನ್ನೈ: ಊಟಿ ಸಮೀಪದ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ನಿಧನರಾಗಿದ್ದಾರೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
ರಾವತ್ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಅರಣ್ಯದ ವ್ಯಾಪ್ತಿಯ ಕೂನೂರು ಬಳಿ ಪತನಗೊಂಡಿತ್ತು. ಈ ಘಟನೆಯಲ್ಲಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ 14 ಜನರ ಪೈಕಿ 13 ಮಂದಿ ಸಾವಿಗೀಡಾಗಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಇತರ 11 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ಸೇನಾ ಹೆಲಿಕಾಪ್ಟರ್ ನಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಮತ್ತು ಹವಾಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಹೆಲಿಕಾಪ್ಟರ್ ಕೂನೂರಿನಿಂದ ಕೊಯಮತ್ತೂರು ಸೇನಾ ಕಾರ್ಯಕ್ರಮಕ್ಕೆ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಮತ್ತು ಇತರ 12 ಜನರನ್ನು ಹೊತ್ತು ತೆರಳುತ್ತಿತ್ತು.