LATEST NEWS
ಗೌರಿ ಲಂಕೇಶ ಹತ್ಯೆ ಪ್ರಕರಣ ಬಂಧನ ಭೀತಿಯಲ್ಲಿ ನಾಲ್ವರು – ನಿರೀಕ್ಷಣಾ ಜಾಮೀನಿಗೆ ಅರ್ಜಿ
ಗೌರಿ ಲಂಕೇಶ ಹತ್ಯೆ ಪ್ರಕರಣ ಬಂಧನ ಭೀತಿಯಲ್ಲಿ ನಾಲ್ವರು – ನಿರೀಕ್ಷಣಾ ಜಾಮೀನಿಗೆ ಅರ್ಜಿ
ಮಂಗಳೂರು ಸೆಪ್ಟೆಂಬರ್ 17: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳದಿಂದ ವಿಚಾರಣೆಗೊಳಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನಾಲ್ವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಆಗಸ್ಟ್ 7ರಂದು ಅರ್ಜಿ ಸಲ್ಲಿಸಿದ್ದಾರೆ.
ಸುಳ್ಯ ತಾಲ್ಲೂಕಿನ ಮೋಹನ್ ಚಾಂತಳ, ಯತೀಶ್ ಮೊಗ್ರ, ಯತಿನ್ ಅಂಬೆಕಲ್ಲು ಮತ್ತು ಕುಮುದಾಕ್ಷ ಜಾಲುಮನೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಗೌರಿ ಹತ್ಯೆ ಪ್ರಕರಣದಲ್ಲಿ ಸಂಪಾಜೆಯ ಮೋಹನ್ ನಾಯ್ಕ್ ಬಂಧನದ ಬಳಿಕ ಎಸ್‌ಐಟಿ ಜುಲೈ 27ರಂದು ಈ ನಾಲ್ವರಿಗೆ ನೋಟಿಸ್ ಜಾರಿಮಾಡಿತ್ತು. ಇದರಿಂದ ಬಂಧನ ಭೀತಿಯಲ್ಲಿರುವ ನಾಲ್ವರು ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ನ್ಯಾಯವಾದಿ ಎಸ್.ಪಿ. ಚೆಂಗಪ್ಪ ಶಂಕಿತ ಆರೋಪಿಗಳ ಪರ ವಾದಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ನಿರೀಕ್ಷಣಾ ಜಾಮೀನು ಕೋರುವುದು ಸರಿಯಲ್ಲ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಿದರು. ಅಲ್ಲದೇ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ನಿಯಂತ್ರಣ (ಕೋಕಾ) ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಆದ್ದರಿಂದ ಈ ಅರ್ಜಿಗಳನ್ನು ಮಾನ್ಯ ಮಾಡಬಾರದು ಎಂದು ಕೋರಿದರು. ಅರ್ಜಿದಾರರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಆಲಿಸಿದ ನ್ಯಾಯಾಲಯ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 20 ಮುಂದೂಡಿದೆ.