National
ಆಂಧ್ರಪ್ರದೇಶದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಮೋನಿಯಾ ಲೀಕ್ ; ಹಲವರು ಅಸ್ವಸ್ಥ !!
ಹೈದರಾಬಾದ್, ಜೂನ್ 27 : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೃಹತ್ ಮದ್ಯ ತಯಾರಿ ಘಟಕದಲ್ಲಿ ಅಮೋನಿಯಂ ಸೋರಿಕೆಯಾಗಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು ಹಲವರು ಅಸ್ವಸ್ಥರಾಗಿದ್ದಾರೆ. ಕರ್ನೂಲ್ ಜಿಲ್ಲೆಯ ನಂದ್ಯಾಲ್ ನಲ್ಲಿರುವ ಸ್ಪೈ ಅಗ್ರೋ ಇಂಡಸ್ಟ್ರೀಸ್ ನಲ್ಲಿ ಘಟನೆ ನಡೆದಿದ್ದು 50 ವರ್ಷದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ವೀರಪಾಂಡ್ಯನ್ ದೃಢಪಡಿಸಿದ್ದಾರೆ.
ಫ್ಯಾಕ್ಟರಿಯ ಒಳಭಾಗದಲ್ಲಿ ಅಮೋನಿಯಾ ಲೀಕ್ ಆಗಿದೆ. ಇದರಿಂದ ಹೊರಭಾಗದಲ್ಲಿ ಯಾವುದೇ ತೊಂದರೆ ಇಲ್ಲ. ವಿಷಯ ಗೊತ್ತಾದ ಕೂಡಲೇ ತಜ್ಞರ ತಂಡ ತೆರಳಿದ್ದು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಂದಿ ಗ್ರೂಪ್ ಆಫ್ ಇಂಡಸ್ಟ್ರಿಗೆ ಸೇರಿದ ಈ ಮದ್ಯ ತಯಾರಿ ಫ್ಯಾಕ್ಟರಿಯಲ್ಲಿ ದಿನವೊಂದಕ್ಕೆ ಒಂದೂವರೆ ಲಕ್ಷ ಲೀಟರ್ ಮದ್ಯ ತಯಾರಿಸಲಾಗುತ್ತದೆ. ಧಾನ್ಯಗಳನ್ನು ಬಳಸಿ ಮದ್ಯ ಉತ್ಪಾದಿಸುವ ಆಧುನಿಕ ರೀತಿಯ ಘಟಕ ಇದಾಗಿದೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗ್ಯಾಸ್ ಲೀಕ್ ಆಗಿ ಹಲವರು ಮೃತಪಟ್ಟ ದುರಂತ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.