DAKSHINA KANNADA
ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸಂಪೂರ್ಣ ಬಸ್ಮವಾದ ಮನೆ

ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸಂಪೂರ್ಣ ಬಸ್ಮವಾದ ಮನೆ
ಸುಳ್ಯ ಫೆಬ್ರವರಿ 10: ಗ್ಯಾಸ್ ಸಿಲಿಂಡರ್ ಒಡೆದು ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಎಂಬಲ್ಲಿ ಸಂಭವಿಸಿದೆ.
ಇಂದು ಸಂಜೆ ಈ ದುರ್ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಮನೆಯಲ್ಲಿ ಯಾರು ಇರದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ. ಕೃಷ್ಣ ಎಂಬವರಿಗೆ ಸೇರಿದ ಈ ಮನೆಯಾಗಿದ್ದು ಆತನ ಪತ್ನಿ ಮತ್ತು ಮಗಳು ಮಾತ್ರ ವಾಸವಿದ್ದರು. ಇಂದು ಬೆಳಿಗ್ಗೆ ಅವರಿಬ್ಬರು ಕಾರ್ಯ ನಿಮಿತ್ತ ಸುಳ್ಯ ಪೇಟೆಗೆ ಹೋಗಿದ್ದರು.

ಇಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಸ್ವಲ್ಪ ಹೊತ್ತಿನಲ್ಲೇ ಭಾರಿ ಸದ್ದು ಕೇಳಿಸಿದೆ. ನೋಡು ನೋಡುತಿದ್ದಂತೆ ಮನೆ ಹೊತ್ತಿ ಉರಿಯಲಾರಂಭಿಸಿದೆ. ಮನೆಯ ಒಳಗೆ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಸಿಲಿಂಡರ್ ಸ್ಪೋಟದ ಪರಿಣಾಮ ಮನೆಯಲ್ಲಿದ್ದ ವಸ್ತುಗಳಲ್ಲಿ ಕೆಲವು ಚೆಲ್ಲಾಪಿಲಿಯಾಗಿ ಹೋದರೆ ಉಳಿದವು ಸುಟ್ಟು ಕರಕಲಾಗಿವೆ. ಬೆಂಕಿಯ ಉಂಡೆ ಮನೆಯ ಮುಂದಿದ್ದ ತೆಂಗಿನ ಮರದ ತುದಿಯವರೆಗೆ ಹಾರಿ ತೆಂಗಿನ ಮರಕ್ಕೂ ಬೆಂಕಿ ಹತ್ತಿಕೊಂಡಿದೆ.
ಸ್ಥಳಿಯರು ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮನೆಯಲ್ಲಿದ್ದ ಸೊತ್ತುಗಳು ಮತ್ತು ಮನೆ ಸಂಪೂರ್ಣ ನಾಶವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತೀರ ಬಡತನದ ಕುಟುಂಬ ಇದೀಗ ಬೀದಿಗೆ ಬಂದಿದೆ.