KARNATAKA
ಈರುಳ್ಳಿ ಜೊತೆ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ….!!
ಬೆಂಗಳೂರು ಡಿಸೆಂಬರ್ 12: ಟೋಮೊಟೋ ಆಯ್ತು ಇದೀಗ ಈರುಳ್ಳಿ ಜೊತೆ ಬೆಳ್ಳುಳ್ಳಿ ಬೆಲೆಯೂ ಗಗನಕ್ಕೆರಿದೆ. ನಾಟಿ ಬೆಳ್ಳುಳ್ಳಿ ಬೆಲೆ 1 ಕೆಜಿಗೆ 400 ಇದ್ದರೆ ಹೈಬ್ರಿಡ್ ಬೆಳ್ಳುಳ್ಳಿ ಬೆಲೆ 300 ರೂಪಾಯಿ ಇದೆ. ಎರಡು ದಿನಗಳ ಹಿಂದೆ ಬೆಳ್ಳುಳ್ಳಿ ದರ 260 ಇದೀಗ ಒಂದೇ ಸಮನೆ 400ರ ಗಡಿ ದಾಟಿದೆ. ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮಳೆ ಕೊರತೆಯಾಗಿದೆ. ಇದು ಬೆಳ್ಳುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಪೂರೈಕೆ ಕಡಿಮೆಯಾಗಿರುವುದೇ ದರ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಾರೆ.
ಮಂಗಳೂರಿನಲ್ಲೂ ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಮೂರು ತಿಂಗಳಲ್ಲಿ ಗರಿಷ್ಠ ₹100 ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಸರಾಸರಿ ₹300 ಇದ್ದು ಉತ್ತಮ ಗುಣಮಟ್ಟದ ಬೆಳ್ಳುಳ್ಳಿಗೆ ₹330ರ ವರೆಗೂ ದರ ಇದೆ. ಪ್ರತಿವರ್ಷ ಡಿಸೆಂಬರ್ ಕೊನೆ ಅಥವಾ ಜನವರಿ ಆರಂಭದಲ್ಲಿ ಹೊಸ ಸರಕು ಬರುತ್ತದೆ. ನವೆಂಬರ್ ಕೊನೆಯಿಂದ ಈರುಳ್ಳಿಯ ಗುಣಮಟ್ಟ ಕಡಿಮೆಯಾಗುತ್ತ ಸಾಗುತ್ತದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ದರ ತೀರಾ ಕಡಿಮೆ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು