LATEST NEWS
ಗಾಂಜಾ ಗ್ಯಾಂಗ್ ಗೆ ಹೆದರಿ ದಿಗಂತ್ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ – ಕಲ್ಲಡ್ಕ ಪ್ರಭಾಕರ್ ಭಟ್ ಆರೋಪ

ಪುತ್ತೂರು ಎಪ್ರಿಲ್ 07: ಪರಂಗಿಪೇಟೆ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ಹಿಂದೆ ಗಾಂಜಾ ಗ್ಯಾಂಗ್ ನ ಕೈವಾಡ ವಿದ್ದು, ದುರಾದೃಷ್ಟವೆಂದರೆ ನಮ್ಮ ನಾಯಕರೂ ಪೋಲೀಸರು ಹೇಳಿದ್ದನ್ನು ನಂಬಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪರಂಗಿಪೇಟೆ ವಿದ್ಯಾರ್ಥಿ ದಿಗಂತ್ ಹಿಂದೆ ಗಾಂಜಾ ಗ್ಯಾಂಗ್ ನ ಕೈವಾಡವಿದೆ. ಆದರೆ ಪೊಲೀಸರು ದಿಗಂತ್ ನಾಪತ್ತೆ ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸರು ದಿಗಂತ್ ಪೋಷಕರನ್ನೂ ತಾವು ಹೇಳುವಂತೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಪತ್ತೆಯಾದ ದಿಗಂತ್ ನಲ್ಲಿ ಪೋಲೀಸರು ರಿಮಾಂಡ್ ಹೋಮ್ ಗೆ ಕೊಂಡೊಯ್ದಿದ್ದರು, ಅಲ್ಲಿಗೆ ದಿಗಂತ್ ತಂದೆ-ತಾಯಿ ಆತನ ಭೇಟಿಗೆ ಹೋಗಿದ್ದರು, ಆ ಸಂದರ್ಭದಲ್ಲಿ ಪೋಲೀಸರು ಕೂಡಾ ಉಪಸ್ಥಿತರಿದ್ದು, ತಾವು ಹೇಳಿದಂತೆ ಹೇಳಲು ದಿಗಂತ್ ಗೆ ಒತ್ತಾಯಿಸಿದ್ದರು, ಪೋಲೀಸರು ಅವರ ಮೇಲಿನವರ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿರಬೇಕು ಎಂದರು.

ಪರೀಕ್ಷೆಗೆ ಹೆದರಿ ಮನೆಯಿಂದ ಓಡಿ ಹೋಗಿರುವುದಾಗಿ ದಿಗಂತ್ ಹೇಳಿದ್ದಾನೆ ಎಂದು ಪೋಲೀಸರೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ, ಆದರೆ ಉಡುಪಿಯಲ್ಲಿ ದಿಗಂತ್ ಪತ್ತೆಯಾದ ಮಾಲ್ ನ ಮಾಲಕ ಕೂಡಲೇ ಈ ವಿಚಾರವನ್ನು ಅವನ ತಾಯಿಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ದಿಗಂತ್ ನನ್ನನ್ನು ಯಾರೋ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದ, ಪೋಲೀಸರು ಕೂಡಾ ದಿಗಂತ್ ನಾಪತ್ತೆ ವಿಚಾರದಲ್ಲಿ ಹಲವು ಕಥೆ ಕಟ್ಟಿದ್ದಾರೆ. ಮನೆಯಿಂದ ಹೊರಟ ದಿಗಂತ್ ಬೈಕ್ ಮೂಲಕ ತೆರಳಿದ್ದಾನೆ ಎಂದಿದ್ದಾರೆ. ಆತ ತೆರಳಿದ ಬೈಕ್ ಯಾವುದೆಂದು ಪೋಲೀಸರು ಪತ್ತೆ ಹಚ್ಚಿಲ್ಲ, ಪರೀಕ್ಷೆಗೆ ಹೆದರಿ ಓಡಿ ಹೋಗುವ ದಿಗಂತ್ ಮನೆಯಿಂದ ಓಡಿ ಹೋಗುವ ಅಗತ್ಯ ಇರಲಿಲ್ಲ, ತನ್ನ ಕಾಲೇಜಿನಿಂದಲೇ ಓಡಿ ಹೋಗಬಹುದಿತ್ತು, ಅಲ್ಲದೆ ಓಡಿ ಹೋಗುವ ಸಂದರ್ಭದಲ್ಲಿ ತನ್ನ ಮೊಬೈಲ್ ಮತ್ತು ಚಪ್ಪಲಿಯನ್ನು ಬಿಟ್ಡು ಹೋಗುವ ಅಗತ್ಯವೇನಿತ್ತು ಎಂದರು.
ಈ ಎಲ್ಲಾ ಘಟನೆಯ ಹಿಂದೆ ಗಾಂಜಾ ಗ್ಯಾಂಗ್ ನ ಕೈವಾಡವಿದೆ, ದುರಾದೃಷ್ಟವೆಂದರೆ ನಮ್ಮ ನಾಯಕರೂ ಪೋಲೀಸರು ಹೇಳಿದ್ದನ್ನು ನಂಬಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಗಾಂಜಾ ವ್ಯಸನಿಗಳು ದಿಗಂತ್ ನನ್ನು ತನ್ನ ಬಲೆಗೆ ಬೀಳಿಸಲು ಯತ್ನಿಸಿದ್ದಾರೆ, ದೊಡ್ಡ ಗಾಂಜಾ ಗ್ಯಾಂಗ್ ಪರಂಗಿಪೇಟೆ ಪರಿಸರದಲ್ಲಿ ಕಾರ್ಯಾಚರಿಸುತ್ತಿದೆ. ಎಲ್ಲಾ ಕೋಮಿನವರೂ ಈ ಗ್ಯಾಂಗ್ ನಲ್ಲಿದ್ದಾರೆ.
ಗಾಂಜಾ ಗ್ಯಾಂಗ್ ಗೆ ಹೆದರಿ ದಿಗಂತ್ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ನನಗೂ ಆ ಗಾಂಜಾ ಗ್ಯಾಂಗ್ ತೊಂದರೆ ಮಾಡುವ ಸಾಧ್ಯತೆಯಿದೆ. ಆದರೆ ನಾನು ಅದಕ್ಕೆಲ್ಲಾ ಹೆದರುವ ವ್ಯಕ್ತಿಯಲ್ಲ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
1 Comment