LATEST NEWS
ಗಾಂಜಾ ಪ್ರಕರಣ – ವೈದ್ಯರು ಮತ್ತು ವೈದ್ಯಕೀಯ ವಿಧ್ಯಾರ್ಥಿಗಳಿಗೆ ಸಿಕ್ತು ಜಾಮೀನು

ಮಂಗಳೂರು ಜನವರಿ 29: ಗಾಂಜಾ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಗರದ ವೈದ್ಯಕೀಯ ಕಾಲೇಜುಗಳ ವೈದ್ಯಕೀಯ ವಿಧ್ಯಾರ್ಥಿಗಳು ಮತ್ತು ವೈದ್ಯರಿಗೆ ಶುಕ್ರವಾರ ಜಾಮೀನು ದೊರೆತಿದೆ.
ಬಂಧನಕ್ಕೊಳಗಾಗಿರುವ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳನ್ನು ಗಾಂಜಾ ಸೇವನೆ ಪ್ರಕರಣದ ಆರೋಪಿಗಳಂತೆ ತೋರುತ್ತಿದ್ದು, ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 (ಬಿ) ಅಡಿ ಅವರ ವಿರುದ್ಧ ಕ್ರಮಕೈಗೊಳ್ಳಬಹುದು. ಹಾಗಾಗಿ ಜಾಮೀನು ಪಡೆಯಲು ಇವರು ಅರ್ಹರು’ ಎಂದು ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಿಗೆ ವಿಶೇಷ ನ್ಯಾಯಾಧೀಶರೂ ಆಗಿರುವ ಎಂ.ರವೀಂದ್ರ ಜೋಷಿ ಅಭಿಪ್ರಾಯಪಟ್ಟಿದ್ದಾರೆ.

₹ 50 ಸಾವಿರ ಭದ್ರತಾ ಠೇವಣಿ ಪಡೆದು 13 ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಅವರು ಆದೇಶಿಸಿದ್ದಾರೆ. ನಿಷೇಧಿತ ಪದಾರ್ಥ ಗಾಂಜಾವನ್ನು ಅಕ್ರಮವಾಗಿ ಹೊಂದಿದ್ದ ಹಾಗೂ ಸೇವನೆ ಮಾಡಿದ ಆರೋಪದ ಮೇರೆಗೆ ನಾಲ್ವರು ವೈದ್ಯರು 18 ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 24 ಆರೋಪಿಗಳನ್ನು ನಗರದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧನಕ್ಕೊಳಗಾಗಿರುವ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು (22 ಮಂದಿ) ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 439ರ ಅಡಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಒಟ್ಟು 13 ಮಂದಿಗೆ ಜಾಮೀನು ಸಿಕ್ಕಿದೆ. ಅನಿವಾಸಿ ಭಾರತೀಯ ನೀಲ್ ಕಿಶೋರಿಲಾಲ್ ರಾಮ್‌ಜಿ ಷಾ ಒಂದನೇ ಆರೋಪಿಯಾಗಿದ್ದು, ಅತನಿಗೆ ಜಾಮೀನು ಸಿಕ್ಕಿಲ್ಲ.