LATEST NEWS
ಈ ಸಲ ಗಣೇಶನ ಹಬ್ಬಕ್ಕಿಲ್ಲ ಕಳೆ ; ಮಂಗಳೂರಿನಲ್ಲಿ ಎಲ್ಲೆಲ್ಲಿರತ್ತೆ ಗಣೇಶೋತ್ಸವ ?
ಮಂಗಳೂರು, ಆಗಸ್ಟ್ 3: ಕೊರೊನಾ ಎಫೆಕ್ಟ್ ಈ ಬಾರಿ ಗಣೇಶೋತ್ಸವಕ್ಕೆ ದೊಡ್ಡ ಮಟ್ಟಿನಲ್ಲಿ ತಟ್ಟಿದೆ. ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಸರಕಾರ ಕಟ್ಟುನಿಟ್ಟಿನ ನಿಯಮ ಹೇರಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಗಣೇಶೋತ್ಸವ ಪೂರ್ತಿಯಾಗಿ ಕಳೆಗುಂದುವ ಲಕ್ಷಣ ಕಂಡುಬಂದಿದೆ. ಪ್ರಮುಖವಾಗಿ ನೆಹರು ಮೈದಾನದಲ್ಲಿ ನಡೆಯುವ ಹಿಂದು ಯವಸೇನೆಯ ಗಣೇಶೋತ್ಸವ, ಸಂಘನಿಕೇತನದ ಆರೆಸ್ಸೆಸ್ ಕೇಂದ್ರಿತ ಗಣೇಶ, ಬಂಟ್ಸ್ ಹಾಸ್ಟೆಲ್ ನಲ್ಲಿ ಬಂಟರ ಸಂಘದಿಂದ ನಡೆಸಲ್ಪಡುವ ಗಣೇಶೋತ್ಸವ ಈ ಬಾರಿ ಆಗುವುದೋ ಇಲ್ಲವೋ ಎನ್ನುವ ಆತಂಕ ಮತ್ತು ಕುತೂಹಲ ಜನರಲ್ಲಿದೆ.
ಸಂಘನಿಕೇತನದ 73ನೇ ವರ್ಷದ ಗಣೇಶೋತ್ಸವವನ್ನು ಸಾಂಕೇತಿಕವಾಗಿ ನಡೆಸಲು ನಿರ್ಧರಿಸಿರುವ ಮಾಹಿತಿ ಲಭಿಸಿದೆ. ಕಮಿಟಿ ಸದಸ್ಯರಲ್ಲಿ ಒಬ್ಬರಾದ ಸತೀಶ್ ಪ್ರಭು ಬಳಿ ವಿಚಾರಿಸಿದಾಗ, ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಎಂದಿನಂತೆ ಐದು ದಿನಗಳ ಗಣೇಶೋತ್ಸವ ನಡೆಸುವುದಾಗಿ ಹೇಳಿದ್ದಾರೆ. ಆದರೆ ಕಮಿಟಿ ಸದಸ್ಯರಿಗೆ ಮಾತ್ರ ಪ್ರವೇಶ ಇರಲಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುವುದಿಲ್ಲ. ತೀರ್ಥಪ್ರಸಾದ, ಸೇವೆಗಳು ಇರುವುದಿಲ್ಲ. ಗಣೇಶನ ಪ್ರತಿಮೆಯೂ ಹಿಂದಿಗಿಂತ ಸಣ್ಣದು ಮಾಡಲಾಗಿದೆ. ಕೊನೆಗೆ ವಿಸರ್ಜನಾ ಮೆರವಣಿಗೆಯೂ ಇರುವುದಿಲ್ಲ. ಆಗಸ್ಟ್ 22ರಂದು ಗಣೇಶನನ್ನು ಪ್ರತಿಷ್ಠಾಪಿಸಿ 26ರಂದು ನೇರವಾಗಿ ಒಯ್ದು ವಿಸರ್ಜನೆ ಮಾಡಲಾಗುವುದು. ಸಾರ್ವಜನಿಕರಿಗೆ ಪ್ರವೇಶದ ಬಗ್ಗೆ ಜಿಲ್ಲಾಡಳಿತ ಅವಕಾಶ ಕೊಟ್ಟರೆ ನೀಡಲಾಗುವುದು. ಮಾಸ್ಕ್, ಸ್ಯಾನಿಟೈಸರ್ ಬಳಸಿಕೊಂಡು ನಿಗದಿತವಾಗಿ ಜನರನ್ನು ಒಳಬಿಡಲು ಅವಕಾಶ ಕೊಟ್ಟಲ್ಲಿ ಪಾಲನೆ ಮಾಡುತ್ತೇವೆ. ಇಲ್ಲದಿದ್ದರೆ ಕಮಿಟಿ ಸದಸ್ಯರು ಮಾತ್ರ ಗಣೇಶನ ಪೂಜೆಯನ್ನು ಸಾಂಕೇತಿಕವಾಗಿ ಮಾಡುತ್ತೇವೆ. ಐದು ದಿನಗಳಲ್ಲೂ ಪೂಜೆಯನ್ನು ಬೆಳಗ್ಗಿನಿಂದ ಸಂಜೆಗೆ ಮುಗಿಸಲಾಗುವುದು ಎಂದಿದ್ದಾರೆ.
ಇನ್ನು ಮೈದಾನದ ಗಣೇಶೋತ್ಸವ ನಡೆಸುವ ಬಗ್ಗೆ ತಯಾರಿಯಲ್ಲಿದ್ದಾರೆ. ಆದರೆ ಅಲ್ಲಿ ಭಾರೀ ಜನ ಸೇರುವುದರಿಂದ ಹೇಗೆ ಮಾಡುವುದೆಂಬ ಚಿಂತೆಯಲ್ಲಿದ್ದಾರೆ. ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತದ ಜೊತೆಗೆ ಮಾತುಕತೆ ಮಾಡಲಾಗುತ್ತಿದೆ. ಇನ್ನೆರಡು ದಿನದಲ್ಲಿ ನಿರ್ಧರಿಸುತ್ತೇವೆ ಎಂದು ಗಣೇಶೋತ್ಸವ ಸಮಿತಿ ಪ್ರಮುಖರಲ್ಲಿ ಒಬ್ಬರಾದ ಭಾಸ್ಕರಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಬಂಟ್ಸ್ ಹಾಸ್ಟೆಲ್ ನಲ್ಲಿ ಬಂಟರ ಸಂಘದಿಂದ ನಡೆಯುವ ಗಣೇಶೋತ್ಸವದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ ಎನ್ನುತ್ತಿದ್ದಾರೆ ಕಮಿಟಿ ಸದಸ್ಯರು. ಹಿರಿಯರು ಬೇಡ ಎನ್ನುತ್ತಿದ್ದರೆ, ಯುವಕರು ಒಂದು ದಿನವಾದ್ರೂ ಸಾಂಪ್ರದಾಯಿಕ ನೆಲೆಯಲ್ಲಿ ಮಾಡಬೇಕು ಎನ್ನುತ್ತಿದ್ದಾರೆ.
ಮಂಗಳೂರು ನಗರದ ಅಲ್ಲಲ್ಲಿ ಬಹುತೇಕ 50ಕ್ಕೂ ಹೆಚ್ಚು ಕಡೆ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿತ್ತು. ಈ ಬಾರಿ ಹೆಚ್ಚಿನ ಸಾರ್ವಜನಿಕ ಗಣೇಶೋತ್ಸವ ಇರುವುದಿಲ್ಲ. ಅದರ ಹಿನ್ನೆಲೆಯಲ್ಲಿ ನಡೆಯುವ ಬಿಸಿನೆಸ್ಸಿಗೂ ಪರೋಕ್ಷವಾಗಿ ಹೊಡೆತ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಪ್ರತೀ ತಾಲೂಕು ಕೇಂದ್ರಗಳಲ್ಲೂ ಭಾರೀ ವಿಜೃಂಭಣೆಯ ಗಣೇಶೋತ್ಸವ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹೊಡೆತ ಎಲ್ಲವನ್ನೂ ಗುಡಿಸಿಹಾಕಿದೆ. ಅತ್ತ ಸಡಗರವೂ ಇಲ್ಲ. ಜನರ ಪಾಲ್ಗೊಳ್ಳುವಿಕೆಯೂ ಇಲ್ಲದೆ ಈ ಬಾರಿ ಗಣೇಶನ ಹಬ್ಬಕ್ಕೆ ಕಳೆಯೇ ಇರಲ್ಲ ಎನ್ನುವಂತಾಗಿದೆ.