LATEST NEWS
ವಿಧ್ಯಾರ್ಥಿನಿಯರಿಗೆ ಸಂಪೂರ್ಣ ಉಚಿತ ಶಿಕ್ಷಣ- ಪ್ರಮೋದ್ ಮಧ್ವರಾಜ್
ವಿಧ್ಯಾರ್ಥಿನಿಯರಿಗೆ ಸಂಪೂರ್ಣ ಉಚಿತ ಶಿಕ್ಷಣ- ಪ್ರಮೋದ್ ಮಧ್ವರಾಜ್
ಉಡುಪಿ ಮಾರ್ಚ್ 6 : ರಾಜ್ಯದಲ್ಲಿ 2018 ರ ಏಪ್ರಿಲ್ 1 ರಿಂದ ಸರಕಾರಿ ಶಾಲಾ ಕಾಲೇಜುಗಳಲ್ಲಿ , ಕೆಜಿ ಯಿಂದ ಪಿಜಿ ವರೆಗೆ ವಿದ್ಯಾಭ್ಯಾಸ ಮಾಡುವ ಎಲ್ಲಾ ಮಹಿಳಾ ವಿದ್ಯಾರ್ಥಿಗಳಿಗೆ, ವಿದ್ಯಾಭ್ಯಾಸಕ್ಕೆ ಸಂಬಂದಿಸಿದ ಎಲ್ಲಾ ವಿಧದ ಶುಲ್ಕಗಳಿಂದ ವಿನಾಯತಿ ನೀಡಿ ಸಂಪೂರ್ಣವಾಗಿ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಮಂಗಳವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ , ತೆಂಕನಿಡಿಯೂರು ಇದರ ಬೆಳ್ಳಿ ಹಬ್ಬ ಸಂಭ್ರಮ, 2017-18 ನೇ ಸಾಲಿನ ವಾರ್ಷಿಕೋತ್ಸವ, ಹಳೆ ವಿದ್ಯಾರ್ಥಿ ಸಂಭ್ರಮ ಮತ್ತು ಅಂತರ್ ಕಾಲೇಜು ಸಾಂಸ್ಕøತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಬಾರಿಯ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗಾಗಿ 2 ಪ್ರಮುಖ ಘೋಷಣೆ ಮಾಡಿದ್ದು, ಮೊದಲನೆಯದಾಗಿ ರಾಜ್ಯದಲ್ಲಿ ಮಹಿಳಾ ವಿದ್ಯಾಭ್ಯಾಸವನ್ನು ಉತ್ತೇಜಿಸುವ ಸಲುವಾಗಿ ಕೆಜಿ ಯಿಂದ ಪಿಜಿ ವರೆಗೆ ಸರಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಉಚಿತ ಶಿಕ್ಷಣ ಹಾಗೂ ಎರಡನೇಯದಾಗಿ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ನೀಡಲಾಗಿದೆ, ಸರಕಾರ ನೀಡಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಂತೆ ಸಚಿವರು ಹೇಳಿದರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಲೇಜು ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ, ಅತಿಥಿ ಉಪನ್ಯಾಸಕರ ನೇಮಕ, ಸಹಾಯಕ ಪ್ರಾದ್ಯಾಪಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ವಾರ್ಷಿಕವಾಗಿ ಕನಿಷ್ಠ 60 ಸಾವಿರಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಹೇಳಿದ ಸಚಿವರು, ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆ ಕಾರಣಾಂತರದಿಂದ ಸ್ಥಗಿತಗೊಂಡಿದ್ದು, ಈಗ ಸಮಸ್ಯೆ ಬಗೆಹರಿದಿದ್ದು, ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದರು.