DAKSHINA KANNADA
ಹಿರಿಯ ನಾಗರೀಕರೊಬ್ಬರ ಶೇರುಗಳನ್ನು ಮೋಸದಿಂದ ಲಪಟಾಯಿಸಿದ ಸಂಬಂಧಿಕ

ಪುತ್ತೂರು ಅಕ್ಟೋಬರ್ 7: ತನ್ನ ಒಪ್ಪಿಗೆ ಇಲ್ಲದೆ ಶೇರು ಮಾರಾಟ ಮಾಡಿದ್ದಲ್ಲದೆ ಶೇರು ಮಾರಾಟದಿಂದ ಬಂದ ಹಣವನ್ನು ನೀಡದೆ ವಂಚನೆ ಮತ್ತು ನಂಬಿಕೆ ದ್ರೋಹ ಮಾಡಿರುವುದಾಗಿ ಹಿರಿಯ ನಾಗರಿಕರೊಬ್ಬರು ತನ್ನ ಸಂಬಂದಿಕರೊಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏಲ್ಮುಡಿ ನಿವಾಸಿ ಪಾಯೀಸ್ ಕಾಂಪೌಂಡ್‌ನ ರಿತೇಶ್ ಪಾಯಿಸ್ ಅವರು ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆಂದು ೮೦ ವರ್ಷ ಪ್ರಾಯದ ಮಂಗಳೂರು ಮೋರ್ಗನ್ ಗೇಟ್ ಶಾಂತಿ ನಿಲಯ ನಿವಾಸಿ ಮೋಲೀ ಫೆರ್ನಾಂಡಿಸ್ ಅವರು ದೂರು ನೀಡಿದವರು.
ನಾನು ನಿವೃತ್ತ ಶಿಕ್ಷಕಿಯಾಗಿದ್ದು ನನ್ನ ಸಹೋದರನ ಮಗ ರಿತೇಶ್ ಪಾಯಿಸ್ ಅವರು ನನ್ನ ಶೇರ್ ವಹಿವಾಟಿನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಲು ಸಹಿಬೇಕೆಂದು ಹೇಳಿ ನನ್ನಿಂದ ಸಹಿಗಳನ್ನು ಪಡೆದು ಬಳಿಕ ನನ್ನ ಅನುಮತಿ ಇಲ್ಲದೆ ‘ಎ.ಸಿ.ಸಿ ಲಿಮಿಟೆಡ್ ಇಕ್ವಿಟಿ’ ಮತ್ತು ‘ಯುನಿಟೆಡ್ ಬ್ರೇವರಿ’ ಶೇರುಗಳನ್ನು ಆತನ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆತ ನನಗೆ ಮೋಸ ಮತ್ತು ವಂಚನೆಗೈಯುವ ಉದ್ದೇಶದಿಂದ ಶೇರುಗಳನ್ನು ನನ್ನ ಒಪ್ಪಿಗೆ ಇಲ್ಲದೆ ಮಾರಿ ಅದರಿಂದ ಬಂದ ಹಣವನ್ನು ನನಗೆ ವರ್ಗಾಯಿಸದೇ ನಂಬಿಕೆದ್ರೋಹ ಎಸಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ರಿತೇಶ್ ಪಾಯಿಸ್ ಅವರು ಅಕ್ಟೋಬರ್ 2ರಂದು ಏಳ್ಮುಡಿಯ ಸಮೀಪ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕ ಮೋಹನ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಜಾತಿ ನಿಂಧನೆ ಎಸಗಿದ್ದ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.