DAKSHINA KANNADA
ಕಟ್ಟಡ ಬಾಡಿಗೆ ಕೇಳಿದರೆ ಬಾಂಬ್ ಇಡುವೆ ಎಂದ ಮಾಜಿ ಸಚಿವ ನಾಗರಾಜ ಶೆಟ್ಟಿ
ಮಂಗಳೂರು, ಮೇ06 : ಕಟ್ಟಡದ ಬಾಡಿಗೆ ಕೊಡುವಂತೆ ಕೇಳಿದರೆ ಬಿಲ್ಡಿಂಗ್ ಅನ್ನು ಬಾಂಬ್ ಇಟ್ಟು ಉರುಳಿಸುತ್ತೇನೆಂದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ನಾಗರಾಜ ಶೆಟ್ಟಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಮೂಲದ ಭೂಮಿ ರಾಮಚಂದ್ರ ಎಂಬವರು ಮಾಜಿ ಸಚಿವ ನಾಗರಾಜ ಶೆಟ್ಟಿಯವರ ವಿರುದ್ಧ ದೂರು ನೀಡಿದ್ದಾರೆ. ನಗರದ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆ ಸಮೀಪ ತನಗೆ ಸೇರಿದ ಬಹು ಮಹಡಿ ವಾಣಿಜ್ಯ ಕಟ್ಟಡವಿದೆ. ಈ ಕಟ್ಟಡಕ್ಕೆ ಮೇ. 3 ರಂದು ಬೆಳಗ್ಗೆ ಇಬ್ಬರು ಅಪರಿಚಿತ ಯುವಕರು ಬಂದು ಬೀಗ ಹಾಕಿರುವ ಶೆಟರ್ಗೆ ಸುತ್ತಿಗೆಯಿಂದ ಹೊಡೆದು ಬೀಗ ಮುರಿದು ಒಳಗೆ ನುಗ್ಗಿದ್ದಾರೆ.
ಈ ವೇಳೆ ಬಿಜೆಪಿಯ ಮಾಜಿ ಸಚಿವ ನಾಗರಾಜ ಶೆಟ್ಟಿ ತನ್ನ ಹಿಂಬಾಲಕರ ಜತೆಗೆ ಅನಧಿಕೃತವಾಗಿ ಪ್ರವೇಶಿಸಿ, ಅಲ್ಲಿ ತಮ್ಮ ಲ್ಯಾಪ್‌ಟಾಪ್, ವಜ್ರದ ಒಡವೆಗಳು, ಅತ್ತಾವರ ಅಪಾರ್ಟ್ ಮೆಂಟ್ ಮತ್ತು ಬಹುಮಹಡಿ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು, ಇಂಡೆಮ್ನಿಟಿ ಬಾಂಡ್, ಚೆಕ್ ಬುಕ್, ಇತರೆ ದಾಖಲೆಗಳನ್ನು ದೋಚಿಕೊಂಡು ಹೋಗಿದ್ದಾರೆ. ಅತಿಕ್ರಮ ಪ್ರವೇಶ ಮಾಡುವ ಜತೆಗೆ ಸ್ಥಳೀಯ ಗುಂಡಾಗಳ ನೆರವಿನಿಂದ ಪೊಲೀಸರು ಈ ಹಿಂದೆ ಹಾಕಿದ್ದ ಬೀಗ ಮುರಿದು ತನ್ನದೇ ಬೀಗ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದೇ ವೇಳೆ, ನಮ್ಮನ್ನು ಯಾರಾದರೂ ತಡೆದರೆ, ಈ ಬಿಲ್ಡಿಂಗ್‌ಗೆ ಬಾಂಬ್ ಹಾಕಿ ಬೀಳಿಸುತ್ತೀನಿ ಎಂದು ಕಟ್ಟಡದ ಸೆಕ್ಯುರಿಟಿ ಗಾರ್ಡ್ ಗೋಬಿಂದ್ ಎಂಬುವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಭೂಮಿ ರಾಮಚಂದ್ರ ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ನಿಯಮ ಬಾಹಿರವಾಗಿ ಕಟ್ಟಡಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೀಗ ಒಡೆದು ಅಲ್ಲಿನ ಲ್ಯಾಪ್‌ಟಾಪ್ ಸಮೇತ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಸಿಟಿವಿ ಆಧರಿಸಿ ದೂರು ಸಲ್ಲಿಸಿದ್ದಾರೆ.