BELTHANGADI
ಬೆಳ್ತಂಗಡಿ – ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯದ ಪ್ರದೇಶದಲ್ಲಿ ಕಾಡ್ಗಿಚ್ಚು
ಬೆಳ್ತಂಗಡಿ ಫೆಬ್ರವರಿ 23: ಬೆಸಿಗೆ ಕಾಲ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಈಗ ಕಾಡ್ಗಿಚ್ಚು ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದೆ. ಇದೀಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದ ಸುಮಾರು 10 ಎಕರೆ ಪ್ರದೇಶದಲ್ಲಿ ಬುಧವಾರ ಭಾರೀ ಕಾಡ್ಗಿಚ್ಚು ವ್ಯಾಪಿಸಿದೆ.
ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದ್ದು, ಶೇ 80ಕ್ಕೂ ಹೆಚ್ಚಿನ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಕಾಡ್ಗಿಚ್ಚಿಗೆ ಕಾರಣವೇನೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಳದಂಗಡಿ ವಲಯದ ಹೂವಿನಕೊಪ್ಪಲು ಹಾಗೂ ಊರ್ಜಾಲುಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿತ್ತು ಎಂದು ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದ ಅರಣ್ಯಾಧಿಕಾರಿ ಸ್ವಾತಿ ಎಲ್ ತಿಳಿಸಿದ್ದಾರೆ.
ಊರ್ಜಾಲುಬೆಟ್ಟದಲ್ಲಿ ಬೆಟ್ಟದ ತಳಭಾಗದಲ್ಲಿ ಬೆಂಕಿಯನ್ನು ಬಹುತೇಕ ನಂದಿಸಲಾಗಿದೆ. ಬೆಟ್ಟದ ತುದಿ ಪ್ರವೇಶವು ಕುದುರೆಮುಖ ವಿಭಾಗದ ವ್ಯಾಪ್ತಿಗೆ ಒಳಪಟ್ಟಿದೆ ಮತ್ತು ಆ ಕಡೆಯಿಂದಲೂ ಕಾರ್ಯಾಚರಣೆ ನಡೆಯುತ್ತಿದೆ. ನಮಗೆ ಸಾಧ್ಯವಾದಷ್ಟೂ ಮಟ್ಟಿಗೆ ಕುದುರೆಮುಖ ವಿಭಾಗದ ವ್ಯಾಪ್ತಿಗೆ ಒಳಪಟ್ಟ ಪ್ರದೇಶದ ಬೆಂಕಿ ನಂದಿಸಲು ಪ್ರಯತ್ನಿಸಿದ್ದೇವೆ. ಅದು ನೆಟ್ವರ್ಕ್ ಇಲ್ಲದ ಪ್ರದೇಶವಾಗಿದ್ದು, ಅರಣ್ಯ ಇಲಾಖೆಯ ಕುದುರೆಮುಖ ವಿಣಭಾಗದ ಸಿಬ್ಬಂದಿ ಜತೆ ಸಂವಹನ ನಡೆಸುವುದು ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.