LATEST NEWS
ಆಹಾರ ಗುಣಮಟ್ಟ ಕಳಪೆಯಾದಲ್ಲಿ ಕ್ಷಮೆಯಿಲ್ಲ – ಜಿಲ್ಲಾಧಿಕಾರಿ ಜಗದೀಶ್
ಆಹಾರ ಗುಣಮಟ್ಟ ಕಳಪೆಯಾದಲ್ಲಿ ಕ್ಷಮೆಯಿಲ್ಲ – ಜಿಲ್ಲಾಧಿಕಾರಿ ಜಗದೀಶ್
ಉಡುಪಿ ನವೆಂಬರ್ 15 : ಜಿಲ್ಲೆಯಲ್ಲಿನ ಬೇಕರಿಗಳು ಮತ್ತು ಆಹಾರ ಉತ್ಪಾದನಾ ಸಂಸ್ಥೆಗಳಲ್ಲಿ ತಯಾರಿಸುವ ಆಹಾರ ಉತ್ಪನ್ನಗಳಲ್ಲಿ ಕಳಪೆ ಗುಣಮಟ್ಟ, ರಾಸಾಯನಿಕಗಳ ಬಳಕೆ ಕಂಡುಬಂದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದರು.
ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಉತ್ನನ್ನ ತಯಾರಿಸುವ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿ ತಯಾರಿಸುವ ಆಹಾರ ಪದಾರ್ಥಗಳ ಸ್ಯಾಂಪಲ್ ತೆಗೆದು ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಆಹಾರ ತಯಾರಿಸುವ ಸ್ಥಳದಲ್ಲಿ ಸ್ವಚ್ಛತೆ ಮತ್ತು ಬಳಸುವ ಪದಾರ್ಥಗಳ ಗುಣಮಟ್ಟವನ್ನೂ ಸಹ ಪರಿಶೀಲಿಸಿ, ನಿಷೇದಿತ ರಾಸಾಯನಿಕಗಳ ಬಳಕೆ, ಮಿತಿಮೀರಿದ ರಾಸಾಯನಿಕಗಳ ಬಳಕೆ ಬಗ್ಗೆ ಸಹ ಪರಿಶೀಲಿಸಿ, ಸಾರ್ವಜನಿಕರ ಆರೋಗ್ಯದ ಮೇಲೆ ಆಟ ಆಡುವ ಸಂಸ್ಥೆಗಳ ವಿರುದ್ದ , ಕಾಯಿದೆಯಲ್ಲಿ ನಿಗಧಿಪಡಿಸಿರುವ ಗರಿಷ್ಠ ದಂಡ ವಿಧಿಸಿ ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿದರು.
ಆಹಾರ ಸುರಕ್ಷಾ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಸ್ಯಾಂಪಲ್ ಗಳನ್ನು ತೆಗೆಯುವಂತೆ ಸೂಚಿಸಿದ ಡಿಸಿ, ಅಧಿಕಾರಿಗಳು ಇನ್ನೂ ಹೆಚ್ಚು ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬೇಕು, ಆಹಾರ ಸುರಕ್ಷಾ ಕಾಯಿದೆಯ ಸಮರ್ಪಕ ಅನುಷ್ಠಾನ ಮಾಡಬೇಕು, ದಿನನಿತ್ಯ ಬಳಸುವ ಎಲ್ಲಾ ಆಹಾರ ಪದಾರ್ಥಗಳು, ಹಣ್ಣು ಮತ್ತು ತರಕಾರಿಗಳ ಮೇಲೆ ರಾಸಾಯನಿಕಗಳ ಬಳಕೆ ನಡೆಯುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ, ಅಧಿಕಾರಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ಪರವಾನಗಿ ಪಡೆದಿರುವ ಆಹಾರ ತಯಾರಿಕೆ ಉದ್ದಿಮೆಗಳು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಿ, ರಸ್ತೆ ಬದಿಯ ವ್ಯಾಪಾರಿಗಳು ಆಹಾರ ಪದಾರ್ಥ ತಯಾರಿಸುವಾಗ ಬಳಸುವ ಕರಿದ ಎಣ್ಣೆಯ ಗುಣಮಟ್ಟವನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದರು.