ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರಿಗೆ ಭದ್ರತೆ ನೀಡಲು ಕೇರಳ ಸರಕಾರ ಹಿಂದೇಟು

ಮಂಗಳೂರು,ನವೆಂಬರ್ 15: ಶಬರಿಮಲೆ ಪ್ರವೇಶಿಸಲು ಇಚ್ಛಿಸುವ ಯಾವುದೇ ಮಹಿಳೆಗೆ ಕೇರಳ ಸರಕಾರ ಪೋಲೀಸ್ ಭದ್ರತೆ ನೀಡುವುದಿಲ್ಲ ಎಂದು ಕೇರಳ ದೇವಸ್ಯಂ ಬೋರ್ಡ್ ಸಚಿವ ಕೆ. ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.

ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ತನ್ನ ತಂಡದೊಂದಿಗೆ ನವಂಬರ್ 16 ರಂದು ಶಬರಿಮಲೆಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಕೇರಳ ದೇವಸ್ಯಂ ಬೋರ್ಡ್ ಈ ಸ್ಪಷ್ಟನೆ ನೀಡಿದೆ. ತೃಪ್ತಿ ದೇಸಾಯಿಯಂತಹ ಮಹಿಳಾ ಹೋರಾಟಗಾರ್ತಿಯರಿಗೆ ತಮ್ಮ ಶಕ್ತಿ ಪ್ರದರ್ಶನ ತೋರಿಸಲು ಶಬರಿಮಲೆ ಕ್ಷೇತ್ರ ಇರುವುದಲ್ಲ.

ಈ ಕಾರಣಕ್ಕಾಗಿ ಕ್ಷೇತ್ರಕ್ಕೆ ಬರುವ 10 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದಿಂದ ಕೆಳಗಿನ ಯಾವುದೇ ಮಹಿಳೆಯರಿಗೆ ಕೇರಳ ಸರಕಾರ ಭದ್ರತೆ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ತೃಪ್ತಿ ದೇಸಾಯಿಯಂತಹ ಹೋರಾಟಗಾರ್ತಿಯರು ಶಬರಿಮಲೆಗೆ ಭೇಟಿ ನೀಡಲು ಬಯಸಿದಲ್ಲಿ ಸುಪ್ರೀಂಕೋರ್ಟ್ ನಿಂದಲೇ ಭದ್ರತೆಯ ಕುರಿತು ಆದೇಶ ಪಡೆಯಬೇಕೆಂದು ಸಚಿವರು ತಿಳಿಸಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ನೀಡಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ 60 ಕ್ಕೂ ಮಿಕ್ಕಿದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ 7 ಸದಸ್ಯ ನ್ಯಾಯಮೂರ್ತಿಗಳ ವಿಸ್ತ್ರತ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ಈ ನಡುವೆ ತೃಪ್ತಿ ದೇಸಾಯಿ ನವಂಬರ್ 16 ರಂದು ತನ್ನ ತಂಡದ ಜೊತೆಗೆ ಶಬರಿಮಲೆ ಪ್ರವೇಶಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಳೆದ ಬಾರಿ ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಇಬ್ಬರು ಮಹಿಳೆಯರನ್ನು ಶಬರಿಮಲೆ ದೇವಸ್ಥಾನಕ್ಕೆ ಕರೆದೊಯ್ದಿದ್ದ ಕೇರಳ ಸರಕಾರ ಈ ಬಾರಿ ಅಂತಹ ಯಾವುದೇ ರೀತಿಯ ಕೆಲಸ ಮಾಡದೇ ಇರಲು ನಿರ್ಧರಿಸಿದೆ. ಈಗಾಗಲೇ 30ಕ್ಕೂ ಅಧಿಕ ಮಹಿಳೆಯರು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈ ನಡುವೆ ಕೇರಳ ಸರಕಾರವೂ ಇದೀಗ ಮಹಿಳೆಯರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಹಿಂದೆ ಸರಿದ ಹಿನ್ನಲೆಯಲ್ಲಿ ಮಹಿಳಾ ಹೋರಾಟಗಾರರ ಮುಂದಿನ ಕ್ರಮ ಯಾವ ರೀತಿಯಾಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Facebook Comments

comments