LATEST NEWS
ಗಗನಕ್ಕೇರಿದ ಮಂಗಳೂರು ಬೆಂಗಳೂರು ವಿಮಾನ ಪ್ರಯಾಣದರ
ಗಗನಕ್ಕೇರಿದ ಮಂಗಳೂರು ಬೆಂಗಳೂರು ವಿಮಾನ ಪ್ರಯಾಣದರ
ಮಂಗಳೂರು ಅಗಸ್ಟ್ 17:ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಬೆಂಗಳೂರಿನ ಸಂಪರ್ಕ ಭಾಗಶಹ ಕಡಿತಗೊಂಡಿರುವ ಹಿನ್ನಲೆಯಲ್ಲಿ ಈಗ ಮಂಗಳೂರು ಬೆಂಗಳೂರು ನಡುವಿನ ವಿಮಾನ ಪ್ರಯಾಣಕ್ಕೆ ಭೇಡಿಕೆ ಬಂದಿದ್ದು. ಪ್ರಯಾಣ ದರ ಗಗನಕ್ಕೇರಿದೆ.
ಮಂಗಳೂರು- ಬೆಂಗಳೂರಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಢಿ ಘಾಟ್ ಅಲ್ಲಲ್ಲಿ ಗುಡ್ಡ ಕುಸಿಯುತ್ತಿರುವ ಪರಿಣಾಮ ಎರಡು ದಿನಗಳಿಂದ ಸಂಚಾರ ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಮಾಣಿ-ಮೈಸೂರು ಹೆದ್ದಾರಿಯ ಮಡಿಕೇರಿ ಘಾಟಿಯಲ್ಲೂ ಇದೇ ಪರಿಸ್ಥಿತಿ ಇರುವ ಕಾರಣ ಈ ರಸ್ತೆ ಸಂಚಾರವೂ ಬಂದ್ ಆಗಿದೆ. ಈ ನಡುವೆ ಮಂಗಳೂರು – ಬೆಂಗಳೂರು ರೈಲು ಮಾರ್ಗದಲ್ಲೂ ಅಲ್ಲಲ್ಲಿ ಗುಡ್ಡ ಕುಸಿಯುತ್ತಿರುವ ಪರಿಣಾಮ ಕಳೆದ ಎರಡು ದಿನಗಳಿಂದ ರೈಲು ಸೇವೆಯೂ ಸ್ಥಗಿತಗೊಂಡಿದೆ.
ಇದೀಗ ಬೆಂಗಳೂರಿಗೆ ಸಮೀಪದ ಸಂಪರ್ಕ ರಸ್ತೆಯಾಗಿರುವ ಚಾರ್ಮಾಡಿಯಲ್ಲಿ ವಿಪರೀತ ವಾಹನ ದಟ್ಟಣೆ ಕಂಡು ಬಂದಿರುವುದರಿಂದ ಆ ರಸ್ತೆ ಸಂಚಾರವೂ ವ್ಯತ್ಯಯವಾಗುತ್ತಿದೆ.
ರಸ್ತೆ ಹಾಗೂ ರೈಲು ಸಂಚಾರ ಸಾಧ್ಯವಾಗದ ಹಿನ್ನಲೆಯಲ್ಲಿ ತುರ್ತು ಬೆಂಗಳೂರಿಗೆ ಪ್ರಯಾಣಿಸುವವರು ಇದೀಗ ಅನಿವಾರ್ಯವಾಗಿ ವಿಮಾನ ಸಂಚಾರಕ್ಕೆ ಮೊರೆ ಹೊಗಿದ್ದಾರೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೋಗುವ ಹಾಗೂ ಬೆಂಗಳೂರಿನಿಂದ ಮರಳಿ ಮಂಗಳೂರಿಗೆ ಬರುವ ಸ್ಪೈಸ್ ಜೆಟ್, ಜೆಟ್ ಏರ್ ವೇಸ್ ಹಾಗೂ ಇಂಡಿಗೋ ವಿಮಾನಗಳಲ್ಲಿ ಸೀಟುಗಳು ಪೂರ್ಣ ಭರ್ತಿಯಾಗಿ ಪ್ರಯಾಣ ನಡೆಸುತ್ತಿವೆ. ಹಲವರಿಗೆ ಟಿಕೆಟ್ ಲಭ್ಯವಾಗದ ಕಾರಣ ಪ್ರಯಾಣವನ್ನೂ ಮೊಟಕಗೊಳಿಸಿದವರಿದ್ದಾರೆ.
ಸಾಮಾನ್ಯ ದಿನಗಳಲ್ಲಿ 2500 ರಿಂದ 3500 ರೂಪಾಯಿ ಇರುವ ಪ್ರಯಾಣದರ ಈಗ ವಿಪರೀತ ಏರಿಕೆಯಾಗಿದೆ. ಮಂಗಳೂರು ಬೆಂಗಳೂರು ಕೆಲವು ವಿಮಾನ ಯಾನ ದರ 12 ಸಾವಿರ ರೂಪಾಯಿಯವರೆಗೂ ಏರಿಕೆಯಾಗಿತ್ತು.
ಕೇಂದ್ರ ಮಂತ್ರಿ ಡಿ.ವಿ ಸದಾನಂದ ಗೌಡ ಕೂಡ ಮಂಗಳೂರು ಬೆಂಗಳೂರಿನ ವಿಮಾನದ ದರ ಏರಿಕೆ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದರು.