LATEST NEWS
ಮೀನು ಸಾಗಾಟ ಲಾರಿಗಳ ಮುಷ್ಕರ – ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ಸ್ಥಗಿತ
ಮೀನು ಸಾಗಾಟ ಲಾರಿಗಳ ಮುಷ್ಕರ – ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ಸ್ಥಗಿತ
ಮಂಗಳೂರು ಡಿಸೆಂಬರ್ 12:ಮೀನು ಸಾಗಾಟ ಲಾರಿಗಳಿಗೆ ತ್ಯಾಜ್ಯ ನೀರು ಹೊರ ಬಿಡಲು ಸೂಕ್ತ ಸ್ಥಳಾವಕಾಶ ಕಲ್ಪಿಸಲು ಒತ್ತಾಯಿಸಿ ಮೀನು ಲಾರಿ ಚಾಲಕರ ಸಂಘಗಳು ಇಂದು ಮೀನು ಸಾಗಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸೇರಿದ ಪ್ರತಿಭಟನಾಕಾರರು ಪೊಲೀಸರು ಹಾಗೂ ಸಾರ್ವಜನಿಕರು ಮೀನು ಸಾಗಾಟ ಲಾರಿ ಚಾಲಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ ಅವರು ತ್ಯಾಜ್ಯ ನೀರು ಹೊರ ಬಿಡಲು ಸೂಕ್ತ ಸ್ಥಳ ಕಲ್ಪಿಸಲು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ಮುಖಂಡ ವಸಂತ ಆಚಾರಿ ಮೀನು ಸಾಗಾಟ ಲಾರಿಗಳ ಮೀನು ತ್ಯಾಜ್ಯ ನೀರು ಸಂಗ್ರಹವಾಗುವ ಟ್ಯಾಂಕ್ ಗಳಿಂದ ನೀರು ಹೊರ ಚೆಲ್ಲಲು ದಕ್ಷಿಣಕನ್ನಡ,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸೂಕ್ತ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಪರಿಸರ ಹಾಳಾಗುತ್ತದೆ, ಅಪಘಾತಗಳಾಗುತ್ತದೆ ಎಂದು ಕಾರಣ ನೀಡಿ ಲಾರಿಗಳನ್ನು ತಡೆದು ಚಾಲಕರಿಗೆ ಹಲ್ಲೆ ನಡೆಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಪೊಲೀಸರು ಮೀನು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಕಿರುಕುಳ ನೀಡುತ್ತಿದ್ದು, ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದರಿಂದ ಚಾಲಕ, ಮಾಲಕರಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.
ಮೀನು ಸಾಗಾಟ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ ಹಿನ್ನಲೆ ಮೀನುಗಾರಿಕಾ ದಕ್ಕೆಯಲ್ಲಿ ಮೀನುವ್ಯವಹಾರ ಅಷ್ಟೇನು ಕಾಣಿಸಲಿಲ್ಲ, ಬೋಟ್ ಗಳಿಂದ ಮೀನುಗಳನ್ನು ಅನ್ ಲೋಡ್ ಮಾಡುತ್ತಿದ್ದ ಕಾರ್ಮಿಕರು ಕೂಡ ಮುಷ್ಕರದಲ್ಲಿ ಪಾಲ್ಗೊಂಡ ಕಾರಣ ಮೀನುಗಾರಿಕೆ ಮೇಲೆ ಪರಿಣಾಮ ಬೀರಿತ್ತು.