DAKSHINA KANNADA
ಮೀನುಗಾರಿಕಾ ಬೋಟ್ ಅಪಘಾತ – ಮೀನುಗಾರರ ರಕ್ಷಣೆ
ಮಂಗಳೂರು ಅಗಸ್ಟ್ 29:- ಮಂಗಳೂರಿನ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಒಂದು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಪದ್ಮನಾಭ ಎಂಬುವರಿಗೆ ಸೇರಿದ ಸೀ ಮಾಸ್ಟರ್ ಟ್ರಾಲ್ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ದಡಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಬೋಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಮುದ್ರ ಮಧ್ಯೆ ಕೆಟ್ಟು ನಿಂತಿತ್ತು. ಇದೇ ಸಂದರ್ಬದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮತ್ತೊಂದು ಮೀನುಗಾರಿಕಾ ದೋಣಿಗೆ ಕೆಟ್ಟು ನಿಂತ ಮೀನುಗಾರಿಕಾ ದೋಣಿಯನ್ನು ಹಗ್ಗದಿಂದ ಬಿಗಿದು ದಡಕ್ಕೆ ಎಳೆ ತರುವ ಪ್ರಯತ್ನ ಮಾಡಲಾಯಿತು.
ಈ ಸಂದರ್ಭದಲ್ಲಿ ಬೋಟ್ ನ ಪ್ರೊಫೆಲ್ಲರ್ ಫ್ಯಾನ್ ಗೆ ಹಗ್ಗ ಸುತ್ತಿಕೊಂಡ ಪರಿಣಾಮ ಹಗ್ಗ ತುಂಡಾಗಿ ನಿಯಂತ್ರಣ ಕಳೆದುಕೊಂಡ ಮೀನುಗಾರಿಕಾ ದೋಣಿ ಮರಳು ದಿಣ್ಣೆಗೆ ಡಿಕ್ಕಿ ಹೊಡೆದಿದೆ ಈ ಪರಿಣಾಮ ಮೀನುಗಾರಿಕಾ ದೋಣಿ ಮುಳುಗಿದೆ. ಈ ಸಂದರ್ಭದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಅಪಾಯದಲ್ಲಿದ್ದ 9 ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪಣಂಬೂರು ಪೊಲೀಸ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾಗಿ ಬೋಟ್ ಮುಳುಗಿದ ಹಿನ್ನೆಲೆಯಲ್ಲಿ ಸುಮಾರು 63 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.