ಮಂಗಳೂರು ಅಗಸ್ಟ್ 29:- ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊರ್ವ ನಿರಂತರ 6 ತಿಂಗಳ ಕಾಲ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಎಂಬಲ್ಲಿನ ಫಾಸ್ಟ್ ಫುಡ್ ಅಂಗಡಿಯೊಂದರಲ್ಲಿ ಕೆಲಸ ಮಾಡುತಿದ್ದ ಕಮ್ಮ ಬಹಾದ್ದೂರ್ ಸಿಂಗ್ ಎಂಬಾತನೆ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪಿ.
ಘಟನೆಯ ವಿವರ
ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ನೇಪಾಳ ಮೂಲದ ಮೂರು ಕುಟುಂಬಗಳು ವಾಸವಾಗಿದ್ದವು. ಇದೇ ಮನೆಯಲ್ಲಿ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ ತನ್ನ ತಂದೆ ತಾಯಿ ಅವರೊಂದಿಗೆ ವಾಸವಾಗಿದ್ದಳು.
ಬಾಲಕಿಯ ಪಕ್ಕದ ಮನೆಯಲ್ಲಿ ಆರೋಪಿ ಕಮ್ಮ ಬಹಾದ್ದೂರ್ ಸಿಂಗ್ ತನ್ನ ಸಹೋದರನೊಂದಿಗೆ ವಾಸವಾಗಿದ್ದ.
ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಾಲಕಿ ಗರ್ಭವತಿಯಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಬಾಲಕಿಯ ಪೋಷಕರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಕೊಣಾಜೆ ಠಾಣೆ ಪೊಲೀಸರು ಆರೋಪಿ ಕಮ್ಮ ಬಹಾದ್ದೂರ್ ಸಿಂಗ್ ನನ್ನು ಬಂಧಿಸಿದ್ದಾರೆ.



