DAKSHINA KANNADA
ಜಿಲ್ಲೆಯಲ್ಲಿ ಮೀನು ಲಾರಿಗಳ ಓಡಾಟ, ರಸ್ತೆಯ ತುಂಬಾ ಹರಡುತಿದೆ ದುರ್ನಾತ
ಜಿಲ್ಲೆಯಲ್ಲಿ ಮೀನು ಲಾರಿಗಳ ಓಡಾಟ, ರಸ್ತೆಯ ತುಂಬಾ ಹರಡುತಿದೆ ದುರ್ನಾತ
ಮಂಗಳೂರು, ಡಿಸೆಂಬರ್ 15: ಮೀನು ಸಾಗಾಟದ ವಾಹನಗಳ ಬೇಕಾ ಬಿಟ್ಟಿ ಚಾಲನೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ರಸ್ತೆಗಳು ದುರ್ನಾತ ಬೀರಲಾರಂಭಿಸಿದೆ.
ರಾತ್ರಿ ಹಗಲೆನ್ನದೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳಲ್ಲೂ ಮೀನಿನ ನೀರನ್ನು ಚೆಲ್ಲುತ್ತಾ ಸಾಗುತ್ತಿರುವ ಈ ಲಾರಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.
ಅದರಲ್ಲೂ ಮಂಗಳೂರಿನ ಮಂಗಳಾದೇವಿ, ಮೋರ್ಗನ್ಸ್ ಗೇಟ್, ಜಪ್ಪಿನಮೊಗರು, ಮಾರ್ಗವಾಗಿ ಸಂಚರಿಸುವ ಈ ಮೀನಿನ ಲಾರಿಗಳು ಮಂಗಳೂರು-ಕಣ್ಣೂರು ರಾಷ್ಟ್ರೀಯ ಹೆದ್ದಾರಿಯನ್ನು ದುರ್ನಾತ ಬೀರುವ ರಸ್ತೆಯನ್ನಾಗಿ ಪರಿವರ್ತಿಸಿದೆ.
ಈ ಮೀನು ಲಾರಿಗಳಿಂದ ಚೆಲ್ಲುವ ದುರ್ನಾತದ ನೀರು ಬೈಕ್ ಸವಾರರ ಮೇಲೂ ಬೀಳುತ್ತಿದ್ದು, ಈ ಬಗ್ಗೆ ಪೋಲೀಸ್ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶವಿದೆ.
ಪ್ರತಿ ಮೀನು ಸಾಗಾಟ ವಾಹನಗಳಲ್ಲಿಯೂ ಮೀನಿನ ನೀರು ಸಂಗ್ರಹವಾಗಲು ಟ್ಯಾಂಕ್ ವ್ಯವಸ್ಥೆಯನ್ನು ಮಾಡಲಾಗಿದ್ದರೂ, ಟ್ಯಾಂಕ್ ಗಳಲ್ಲಿ ತುಂಬಿದ ನೀರನ್ನು ನೇರವಾಗಿ ರಸ್ತೆಗೆ ಬೀಳುವಂತಹ ವ್ಯವಸ್ಥೆಯನ್ನು ಲಾರಿಯಲ್ಲಿ ಮಾಡಲಾಗಿದೆ.
ಅಲ್ಲದೆ ಇನ್ನು ಕೆಲವು ವಾಹನಗಳಲ್ಲಿ ಟ್ಯಾಂಕ್ ವ್ಯವಸ್ಥೆಯನ್ನೂ ಮಾಡಲಾಗಿಲ್ಲ.
ರಾತ್ರಿ ಹಾಗೂ ಹಗಲು ಹೊತ್ತಿನಲ್ಲೂ ಈ ಮೀನು ಲಾರಿಗಳ ಆರ್ಭಟ ಹೆಚ್ಚಾಗುತ್ತಿದ್ದು, ಕಾನೂನು ಮೀರಿ ಸಂಚರಿಸುವ ಈ ಲಾರಿಗಳನ್ನು ಟ್ರಾಫಿಕ್ ಪೋಲೀಸರು ನೋಡಿಯೂ ನೋಡದಂತೆ ಮಾಡುತ್ತಿರುವುದರಿಂದಾಗಿಯೇ ಮೀನಿನ ಲಾರಿಗಳ ಚಾಲಕರು ಕಾನೂನು ಮೀರಿ ವರ್ತಿಸಲಾರಂಭಿಸಿದ್ದಾರೆ.
ರಸ್ತೆಯಲ್ಲಿ ನೀರನ್ನು ಚೆಲ್ಲುತ್ತಿರುವ ಬಗ್ಗೆ ಲಾರಿ ಚಾಲಕರಲ್ಲಿ ವಿಚಾರಿಸಿದರೂ, ರೌಡಿಗಳಂತೆ ವರ್ತಿಸುವ ಈ ಚಾಲಕರ ವರ್ತನೆಯನ್ನು ನಿಯಂತ್ರಿಸುವ ಅನಿವಾರ್ಯತೆಯಿದೆ.
ಮೀನಿನ ಲಾರಿಗಳಲ್ಲಿ ಅಳವಡಿಸಲಾದ ನೀರು ತುಂಬಿದ ಟ್ಯಾಂಕ್ ಗಳನ್ನು ಜನನಿಭಿಡ ಪ್ರದೇಶಗಳಲ್ಲಿ ಮಾತ್ರ ಖಾಲಿ ಮಾಡಬೇಕೆಂಬ ನಿಯಮವಿದ್ದರೂ, ಕೆಲವು ಚಾಲಕರು ರಸ್ತೆ ಬದಿಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ನೀರನ್ನು ಬಿಡುತ್ತಿರುವುದರಿಂದ ಹೆದ್ದಾರಿ ತುಂಬಾ ದುರ್ನಾತ ಬೀರಲಾಂಭಿಸಿದೆ.
ಪೋಲೀಸರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಇದೇ ವಿಚಾರವಾಗಿ ಬೀದಿ ಸಂಘರ್ಷವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.