LATEST NEWS
ಮದುವೆ ಮೆರವಣಿಗೆಗೆ ಜೋಶ್ ತುಂಬಲು ಗಾಳಿಯಲ್ಲಿ ಫೈರಿಂಗ್ : ಗುಂಡು ತಗುಲಿ ಇಬ್ಬರಿಗೆ ಗಾಯ

ಉತ್ತರ ಪ್ರದೇಶ: ಮದುವೆಯ ಮೆರವಣಿಗೆ ಸಂಭ್ರಮಾಚರಣೆಗೆ ಗಾಳಿಯಲ್ಲಿ ಹಾರಿಸಿದ ಗುಂಡು ಆಕಸ್ಮಿಕವಾಗಿ ಇಬ್ಬರಿಗೆ ತಗುಲಿ ಗಾಯಗೊಂಡಿರುವ ಘಟನೆ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಈ ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಬಿಸ್ರಖ್ ಗ್ರಾಮದ ನಿವಾಸಿ ಅಲೋಕ್ ಎಂಬುವವರ ವಿವಾಹದ ಮೆರವಣಿಗೆ ಸಕಿಪುರ್ ಗ್ರಾಮದ ಆಶೀರ್ವಾದ್ ಮದುವೆ ಮನೆಗೆ ಬರುತ್ತಿತ್ತು. ಈ ವೇಳೆ ರಾತ್ರಿ 10 ಗಂಟೆ ಸುಮಾರಿಗೆ ಮದುವೆ ಮೆರವಣಿಗೆಯಲ್ಲಿದ್ದ ಕೆಲವರು ಸಂಭ್ರಮಾಚರಣೆಗೆಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದು ಗುರಿ ತಪ್ಪಿ ಮೆರವಣಿಗೆಯಲ್ಲಿದ್ದ ಇಬ್ಬರಿಗೆ ತಗುಲಿದ್ದು, ಗಾಯಗೊಂಡಿದ್ದಾರೆ” ಎಂದು ಪೊಲೀಸ್ ಆಯುಕ್ತ ಲಕ್ಷ್ಮಿ ಸಿಂಗ್ ಅವರು ತಿಳಿಸಿದ್ದಾರೆ.

ಸಂತೋಷ್ (45) ಮತ್ತು ದಯಾಳ್ (23) ಗಾಯಗೊಂಡವರಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಗುಂಡು ಹಾರಿಸಿದವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಯುಕ್ತೆ ಹೇಳಿದ್ದಾರೆ.
1 Comment