LATEST NEWS
ಮಂಗಳೂರು – ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಪಟಾಕಿ ತಯಾರಿಕಾ ಘಟಕ ತಾತ್ಕಾಲಿಕವಾಗಿ ಸೀಲ್ ಡೌನ್
ಮಂಗಳೂರು ಜನವರಿ 30: ಬೆಳ್ತಂಗಡಿಯ ವೇಣೂರಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಪೋಟ ಪ್ರಕರಣದ ಬಳಿಕ ಎಚ್ಚೆತ್ತ ದಕ್ಷಿಣಕನ್ನಡ ಜಿಲ್ಲಾಡಳಿತ ಜಿಲ್ಲೆಯಲ್ಲಿ ಇರುವ ಎಲ್ಲಾ ಪಟಾಕಿ ತಯಾರಿಕಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (ಪ್ರಭಾರ) ಡಾ.ಆನಂದ ಕೆ. ಅವರು ಜಿಲ್ಲೆಯಲ್ಲಿರುವ ಎಲ್ಲಾ ಪಟಾಕಿ ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ನಿರ್ಬಂಧಿಸಿ ಅಮಾನತ್ತಿನಲಿಡಲು ಆದೇಶಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ, ಸರ್ಕಾರದ ಮಾರ್ಗಸೂಚಿ ಪಾಲನೆಯ ಮರುಪರಿಶೀಲನೆಗಾಗಿ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಪಟಾಕಿ ತಯಾರಿಕೆ, ಮಾರಾಟ ಘಟಕಗಳ ಮರುಪರಿಶೀಲನೆಗೆ ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ.
ಮಂಗಳೂರು ಮತ್ತು ಪುತ್ತೂರು ಎಸಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ತಕ್ಷಣ ಸೀಲ್ಡೌನ್ ಮಾಡಲು ಆದೇಶಿಸಲಾಗಿದೆ. ಬಳಿಕ ಸ್ಪೋಟಕ ಅಧಿನಿಯಮ ಮತ್ತು ಸರ್ಕಾರದ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಿ ಪೆಬ್ರವರಿ 5 ರ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.