DAKSHINA KANNADA
ಬಜಪೆ ಫ್ಲ್ಯಾಟ್‌ನಲ್ಲಿ ಬೆಂಕಿ ಅವಘಡ: 30 ಮಂದಿಯ ರಕ್ಷಿಸಿದ ಸ್ಥಳೀಯರು
ಮಂಗಳೂರು, ಜನವರಿ 05: ನಿನ್ನೆ ರಾತ್ರಿ ಮಂಗಳೂರಿನ ಬಜಪೆ ಸಮೀಪದ ಕಂದಾವರದ ಫ್ಲ್ಯಾಟ್‌ನಲ್ಲಿ ಇದ್ದಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದ್ದು ಅದರಲ್ಲಿ ಸಿಲುಕಿದ್ದ 30 ಮಂದಿಯನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ.
ರಾತ್ರಿ ಸುಮಾರು 9.45ರ ವೇಳೆ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ದಟ್ಟವಾದ ಹೊಗೆ ಮೇಲಿನ ಮಹಡಿಗಳಲ್ಲಿ ಆವರಿಸಿತ್ತು. ಕೊಠಡಿಗಳಲ್ಲಿ ಹೊಗೆ ತುಂಬಿದಾಗ ಘಟನೆಯ ಬಗ್ಗೆ ಮೇಲ್ಗಡೆ ಇದ್ದವರ ಗಮನಕ್ಕೆ ಬಂದಿತ್ತು. ಗಾಬರಿಗೊಂಡ ಅವರು ಕೂಡಲೇ ನೆರವಿಗಾಗಿ ಬೊಬ್ಬೆ ಹಾಕಿದರು. ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು.
ಇಡೀ ಫ್ಲ್ಯಾಟ್‌ನಲ್ಲಿ ಹೊಗೆ ಆವರಿಸಿದ್ದರಿಂದ ಕೂಡಲೇ ಆಪತ್ಭಾಂಧವ ಗುರುಪುರದ ರಫೀಕ್ ಅವರನ್ನು ಕರೆಸಿ ಅವರ ಜತೆ ಸ್ಥಳೀಯರೂ ಸೇರಿ ಅಪಾಯಕ್ಕೆ ಸಿಲುಕಿದ್ದ ಎಲ್ಲಾ 30 ಜನರನ್ನು ರಕ್ಷಿಸಿದರು. ವಿದ್ಯುತ್ ಮೀಟರ್ ಬೋರ್ಡ್ ಸುಟ್ಟು ಹೋಗಿದ್ದರಿಂದ ಫ್ಲ್ಯಾಟ್‌ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಹಾಗಾಗಿ ಮೊಬೈಲ್ ಪೋನ್‌ಗಳ ಬೆಳಕಿನಲ್ಲಿಯೇ ಸಂಪೂರ್ಣ ಕಾರ್ಯಾಚರಣೆ ನಡೆಸಲಾಯಿತು. ಅಪಾರ್ಟ್‌ಮೆಂಟ್ ನ ಕೊಠಡಿಗಳಲ್ಲಿ ಸಿಲುಕಿದ್ದವರನ್ನು ಮುಖಕ್ಕೆ ಬಟ್ಟೆ ಕಟ್ಟಿ ಉಸಿರಾಟಕ್ಕೆ ತೊಂದರೆಯಾಗದಂತೆ ಹೊಗೆಯಿಂದ ರಕ್ಷಿಸಿ ಕೆಳಗಡೆ ಕರೆದೊಯ್ಯಲಾಯಿತು.
ಕೆಲವರು ಅಲ್ಪ ಸ್ವಲ್ಪ ಉಸಿರಾಟದ ಅನುಭವಿಸಿದರೂ ಬಳಿಕ ಚೇತರಿಸಿಕೊಂಡಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಸುಮಾರು 10 ವರ್ಷ ಹಳೆಯ ಫ್ಲ್ಯಾಟ್ ಆಗಿದ್ದು, 21 ಮನೆಗಳಿವೆ. ಬೆಂಕಿ ಅಪಘಾತ ಸಂಭವಿಸಿದಾಗ ಐದಾರು ಮನೆಗಳಲ್ಲಿ ಮಾತ್ರ ಜನರಿದ್ದರು.